ಮಂಗಳೂರು ಉತ್ತರ ಟಿಕೆಟ್ ಫೈಟ್: ಕಾಂಗ್ರೆಸ್ ಹಗ್ಗ-ಜಗ್ಗಾಟದಲ್ಲಿ ಬಿಜೆಪಿ ಸೈಲೆಂಟ್
ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಉಂಟಾಗಿದ್ದು, ಇತ್ತ ಕಾಂಗ್ರೆಸ್ ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಎದ್ದಿದೆ.
ಪ್ರವಾಸೋದ್ಯಮ, ಉದ್ಯಮ, ಶಿಕ್ಷಣ ಸಂಸ್ಥೆಗಳನ್ನೊಂಡ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿಎರಡು ದಶಕಗಳಿಂದೀಚೆಗೆ ಬಿಜೆಪಿ 2 ಬಾರಿ ಮತ್ತು ಕಾಂಗ್ರೆಸ್ 2 ಬಾರಿ ಗೆಲ್ಲುವ ಮೂಲಕ ಸಮಬಲ ಸಾಧಿಸಿದೆ.
2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎ.ಮೊಹಿಯುದ್ದೀನ್ ಬಾವ ಅವರ ವಿರುದ್ಧ ಬಿಜೆಪಿಯ ಡಾ.ಭರತ್ ಶೆಟ್ಟಿ ವೈ. ಮೊದಲ ಬಾರಿಗೆ ಸ್ಪರ್ಧಿಸಿ 26,648 ಮತಗಳ ಅಂತರದಿಂದ ಗೆದ್ದಿದ್ದರು. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿರುವ ಡಾ.ಭರತ್ ಶೆಟ್ಟಿ ವೈ ಅವರು ಅಭಿವೃದ್ಧಿ ವಿಚಾರದಲ್ಲಿ ತನ್ನದೇ ಆದ ವರ್ಚಸ್ಸನ್ನು ಸೃಷ್ಟಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಭರತ್ ಸ್ಪರ್ಧೆ ಸಾಧ್ಯತೆ: ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿಯೂ ಸದ್ದು ಮಾಡುತ್ತಿದ್ದಾರೆ. ಈ ಎಲ್ಲ ದೃಷ್ಟಿಕೋನವಿಟ್ಟು ಬಿಜೆಪಿ ಮತ್ತೆ ಡಾ.ಭರತ್ ಶೆಟ್ಟಿಯವರನ್ನೇ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರೂ, ಕೆಲವು ಮುಖಂಡರು ಸದ್ದಿಲ್ಲದೆ ಕ್ಷೇತ್ರದತ್ತ ದೃಷ್ಟಿ ನೆಟ್ಟಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಡಾ.ಭರತ್ ಅವರು ದಂತ ವೈದ್ಯ ಪದವೀಧರರಾಗಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಇವರನ್ನೇ ಶಿಫಾರಸ್ಸು ಮಾಡುವ ಬಗ್ಗೆ ಪಕ್ಷದೊಳಗೆ ಚಿಂತನೆಯಿದೆ. ಹಾಗಿರುವಾಗ ಕೊನೇ ಕ್ಷಣದಲ್ಲಿ ಬಿಜೆಪಿ ಸುರತ್ಕಲ್‌ಗೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಆಚ್ಚರಿಯಿಲ್ಲ.
ಕೈನಲ್ಲಿ ಟಿಕೆಟ್ ಪೈಪೋಟಿ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಈ ಭಾರಿ ಹೈ-ಫೈಟ್ ಆರಂಭವಾಗಿದ್ದು ಈಗಾಗಲೇ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಮೊಯಿದ್ದೀನ್ ಬಾವ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕವಿತಾ ಸನಿಲ್, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಅಲ್ತಾಫ್ ಸುರತ್ಕಲ್, ಲುಕ್ಮಾನ್ ಬಂಟ್ವಾಳ ಕೂಡ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ಟಿಕೆಟ್‌ಗೆ ಕಾಂಗ್ರೆಸ್ ನಾಯಕರ ಸ್ಪರ್ಧೆಯನ್ನು ಬಿಜೆಪಿ ಸೈಲೆಂಟಾಗಿ ಗಮನಿಸುತ್ತಿದೆ.
ಅಲಿ ಮತ್ತು ಬಾವಾ ನಡುವೆ ಬಿಗ್ ಫೈಟ್: ಕಾಂಗ್ರೆಸ್ ಟಿಕೆಟ್‌ಗಾಗಿ ಡಿ.ಕೆ.ಶಿವಕುಮಾರ್ ಆಪ್ತರಾಗಿರುವ ಇನಾಯತ್ ಅಲಿ ಮತ್ತು ಸಿದ್ದರಾಮಯ್ಯ ಆಪ್ತರಾಗಿರುವ ಮೊಹಿಯುದ್ದೀನ್ ಬಾವ ಮಧ್ಯೆ ನೇರ ಫೈಟ್ ಆರಂಭವಾಗಿದೆ. ಮೊಹಿಯುದ್ದೀನ್ ಬಾವ ಮಾಜಿ ಶಾಸಕರಾಗಿ ಕ್ಷೇತ್ರದಲ್ಲಿಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದವರು. ಇನಾಯತ್ ಅಲಿ ಅವರು ಒಂದು ವರ್ಷದಿಂದೀಚೆಗೆ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು, ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿ ನೆರವಿನ ಹಸ್ತ ಚಾಚುವ ಮೂಲಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಸ್ವತಃ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ. ಒಂದು ಮೂಲದ ಪ್ರಕಾರ ಮುಸ್ಲಿಂ ಅಭ್ಯರ್ಥಿಗಳನ್ನು ಒಮ್ಮತಕ್ಕೆ ತಂದು, ಸುರತ್ಕಲ್‌ನಲ್ಲಿ ಹಿಂದೂ ಅಭ್ಯರ್ಥಿಯನ್ನು ನಿಲ್ಲಿಸಿ ಬಿಜೆಪಿಯ ಹಿಂದೂ ಅಜೆಂಡಾಕ್ಕೆ ಸೆಡ್ಡು ಹೊಡೆಯುವ ಪ್ರಯತ್ನವೂ ಕಾಂಗ್ರೆಸ್ ಮುಂದಿದೆ.
ಇನಾತ್ ಆಲಿ ಮತ್ತು ಮೊಹಿಯುದ್ದೀನ್ ಬಾವ ಕಾಂಗ್ರೆಸ್ ಟಿಕೆಟ್‌ಗೆ ಮುಗಿಬಿದ್ದಿದ್ದು, ಕ್ಷೇತ್ರದಲ್ಲಿ ಬಿಡುವಿಲ್ಲದೆ ಓಡಾಟ ಮಾಡುತ್ತಿದ್ದಾರೆ. ಒಬ್ಬರು ಹೋದ ಕಡೆ ಮತ್ತೊಬ್ಬರು ತೆರಳಿ ತಮ್ಮ ಬಲಾಬಲ ಪ್ರದರ್ಶನ ಮಾಡುತ್ತಿದ್ದಾರೆ. ಪ್ರಜಾಧ್ವನಿ ಯಾತ್ರೆಯಲ್ಲೂ ಕಾಂಗ್ರೆಸ್‌ನ ಇಬ್ಬರು ನಾಯಕರು ತಮ್ಮದೇ ಶೈಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು.
ಗುದ್ದಲಿಪೂಜೆ ಗದ್ದಲ: ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಬೆಳಗ್ಗಿನಿಂದ ನಡುರಾತ್ರಿಯವರೆಗೆ ಕ್ಷೇತ್ರದಲ್ಲಿಓಡಾಟ ಮಾಡಿ ಸಭೆ- ಸಮಾರಂಭ, ಜಾತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಈ ಮಧ್ಯೆ ಉದ್ಘಾಟನೆ, ಗುದ್ದಲ್ಲಿಪೂಜೆಗಳು ಜೋರಾಗಿವೆ. ಡಾ.ಭರತ್ ಶೆಟ್ಟಿ ಕ್ಷೇತ್ರಾದ್ಯಂತ ಜನಸ್ಪಂದನ ಕಾರ್ಯಕ್ರಮವನ್ನು ಮಾದರಿಯಾಗಿ ನಡೆಸಿದ್ದಾರೆ.
ಜನರ ಒಲೈಕೆಗೆ ಕ್ರೀಡಾಕೂಟ, ಶಿಬಿರದ ತಂತ್ರ: ಬಿಜೆಪಿ-ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹಗ್ಗ- ಜಗ್ಗಾಟ, ಕ್ರಿಕೆಟ್, ವಾಲಿಬಾಲ್ ಪಂದ್ಯಾಟ ಆಯೋಜಿಸುತ್ತಿದ್ದಾರೆ. ವೈದ್ಯಕೀಯ, ದಂತ ಶಿಬಿರ ಸೇರಿದಂತೆ ನಾನಾ ರೀತಿ ಕ್ಯಾಂಪ್‌ಗಳು ಜೋರಾಗಿವೆ.
ದಕ್ಷಿಣ ಬಿಲ್ಲವರಿಗೆ, ಉತ್ತರದಲ್ಲಿ ಬಂಟರಿಗೆ ಟಿಕೇಟ್ ಕೊಡ್ತಾರಾ?
ಕಾಂಗ್ರೆಸ್‌ನ ಒಂದು ಮೂಲದ ಪ್ರಕಾರ ಬಿಜೆಪಿ ಮಾದರಿಯಲ್ಲೇ ಈ ಬಾರಿ ಕಾಂಗ್ರೆಸ್ ಕೂಡಾ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅಚ್ಚರಿ ಆಯ್ಕೆ ನಡೆಸುವ ಸಾಧ್ಯತೆ ಇದೆ. ಎರಡೂ ಕ್ಷೇತ್ರದಲ್ಲೂ ಮುಂಚೂಣಿ ಪ್ರಚಾರದಲ್ಲಿರುವ ಅಭ್ಯರ್ಥಿಗಳನ್ನು ಕೈಬಿಟ್ಟು, ಮಂಗಳೂರು ದಕ್ಷಿಣದಲ್ಲಿ ಬಿಲ್ಲವರಿಗೆ ಮತ್ತು ಉತ್ತರದಲ್ಲಿ ಬಂಟ ಸಮುದಾಯಕ್ಕೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ವಲಯದಲ್ಲೇ ಚರ್ಚೆಯಾಗುತ್ತಿದೆ. ಟಿಕೆಟ್ ಆಕಾಂಕ್ಷಿಯಾಗಿರುವ ಅಲ್ಪಸಂಖ್ಯಾತ ಸ್ಪರ್ಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ಮೂಲಕ ಬಗೆಹರಿಸುವ ಬಗ್ಗೆ ಹಿರಿಯ ನಾಯಕರು ಚಿಂತನೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ಸಿಕ್ಕಿ ಅಂತಿಮವಾಗಿ ಅರ್ಜಿ ಸಲ್ಲಿಸುವ ತನಕ ಯಾವುದೇ ಮ್ಯಾಜಿಕ್ ನಡೆದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.