ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು ; ನವೆಂಬರ್ ೧೯: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮತದಾರರ ಪರಿಷ್ಕರಣೆ ಮತದಾರರ ಪರಿಷ್ಕರಣೆ ಪ್ರತಿ ವರ್ಷ ಹಾಗೂ ಚುನಾವಣೆ ಸಂದರ್ಭದಲ್ಲಿ ಮಾಡಲಾಗುತ್ತದೆ.
ವಿರೋಧ ಪಕ್ಷದವರು ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಎಲ್ಲದ್ದಕ್ಕೂ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಬಿಡಿಎ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾದಾಗ ಅದರಿಂದ ಪಾರಾಗಲು ಅನುಕೂಲವಾಯಿತು. ಶೀಘ್ರವಾಗಿ ಅಪರಾಧದ ವಿರುದ್ಧ ಪೊಲೀಸ್ ಕೆಲಸ ಮಾಡುತ್ತದೆ. ಈಗಾಗಲೇ ಬಂಧವವೂ ಆಗಿದೆ. ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಕರಾವಳಿಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆ
ಇನ್ನೂ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಂದೂವರೆಯಿಂದ ಎರಡು ಲಕ್ಷ ಕೋಟಿ ಬಂಡವಾಳದ ನಿರೀಕ್ಷೆ ಇದೆ. ದೊಡ್ಡ ಪ್ರಮಾಣದ ಹೂಡಿಕೆ ಕರಾವಳಿಯಲ್ಲಿ ಆಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಉತ್ಪಾದನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗಿದೆ. ಈಗಾಗಲೇ ಮೂರು ನವೀಕರಿಸಬಹುದಾದ ಇಂಧನ ಕಂಪೆನಿಗಳೊಂದಿಗೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಯಲ್ಲಿ ಅನುಮೋದನೆ ನೀಡಲಾಗಿದೆ. ಬಹಳ ವೇಗದಲ್ಲಿ ಕೆಲಸಗಳಾಗುತ್ತಿದ್ದು, ಮಾರ್ಚ್ ಏಪ್ರಿಲ್ ವೇಳೆಗೆ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ಹೇಳಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಿದೆ. ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬರಲಿದ್ದು, ಗಲ್ಫ್ ದೇಶದಲ್ಲಿ ಮತ್ತು ಮಂಗಳೂರಿನಲ್ಲಿ ತಲೆ ಎತ್ತಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರು ಮಾಡುವ ಪ್ರಮುಖ ಘಟ್ಟ ಬರಲಿದೆ. ನವೀಕರಿಸಬಹುದಾದ ಇಂಧನ ಘಟಕ್ಕೆ ಅಗತ್ಯ ವಿರುವ ಇಂಧವನ್ನೂ ನವೀಕರಿಸಬಹುದಾದ ಇಂಧನ ಮೂಲಗಳಾದ ಸೋಲಾರ್, ವಿಂಡ್ ಮಿಲ್ ಗಳಿಂದಲೇ ಪಡೆಯಲಾಗುವುದು. ಸಂಪೂರ್ಣವಾಗಿ ಹಸಿರು ಯೋಜನೆಯಾಗಲಿದೆ ಎಂದರು.
ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ನಿರಂತರವಾಗಿ ಮಳೆ ಬಂದಿದ್ದರಿಂದ ತಡವಾಗಿದೆ. ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಬೇಕಿದೆ. ಈ ವಾರದಲ್ಲಿ ಅದಕ್ಕೆ ಪೂರಕವಾಗಿ ಇಡೀ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಭೆ ಕರೆಯಲಾಗುವುದು. ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ ಕೆಲಸಗಳಾದ ಸುರಂಗ ಮಾರ್ಗ, ವೈಟ್ ಟಾಪಿಂಗ್ ಮುಂತಾದ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಅಲ್ಪಾವಧಿ ಕಾಮಗಾರಿಯಲ್ಲಿ ರಸ್ತೆಯಲನ್ನು ಬಳಕೆಗೆ ಯೋಗ್ಯವಾಗಿಸುವುದು ಹಾಗೂ ದೀರ್ಘಾವಧಿ ಕಾಮಗಾರಿ ಗಳಲ್ಲಿ ಸುರಂಗ ಮಾರ್ಗ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.