ದೀಪಾವಳಿಗೆ ಪಟಾಕಿ ಸಿಡಿಸಲು ಸಜ್ಜಾಗಿರುವಿರಾ ? ಹಾಗಾದ್ರೆ ನಿಮಗಿದು ತಿಳಿದಿರಲಿ

ದೀಪಾವಳಿಗೆ ಪಟಾಕಿ ಸಿಡಿಸಲು ಸಜ್ಜಾಗಿರುವಿರಾ ? ಹಾಗಾದ್ರೆ ನಿಮಗಿದು ತಿಳಿದಿರಲಿ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಭಾನುವಾರದಿಂದ ಹಬ್ಬವನ್ನು ಆಚರಿಸಲು ಹಲವರು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಟಾಕಿ ಕುರಿತಂತೆ ಸುತ್ತೋಲೆಯೊಂದನ್ನು ಹೊರಡಿಸಿದೆ.

ಬೆಳಕಿನ ಹಬ್ಬ ದೀಪಾವಳಿ ಪಟಾಕಿ ಹಬ್ಬವೂ ಹೌದು. ಆದರೆ ಇದೀಗ ಈ ಸುತ್ತೋಲೆಯನ್ನು ಎಲ್ಲರೂ ಪಾಲನೆ ಮಾಡಬೇಕಿದೆ. ಬೆಂಗಳೂರು ನಗರ ಪ್ರದೇಶದಲ್ಲಿ ರಾತ್ರಿಯಿಡೀ ಬೇಕಾಬಿಟ್ಟಿ ಪಟಾಕಿಗಳನ್ನು ಸಿಡಿಸುವಂತಿಲ್ಲ, ದೀಪಾವಳಿ ಸಂದರ್ಭದಲ್ಲಿ ಪ್ರತಿದಿನ ರಾತ್ರಿ 8 ರಿಂದ 10 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಶಬ್ದ ಮಾಲಿನ್ಯವನ್ನು ಹೆಚ್ಚಿಸುವ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕೆಂಬ ನಿಯಮ ಕೂಡ ಜಾರಿಯಲ್ಲಿದ್ದು, ತಪ್ಪಿದಲ್ಲಿ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಮಾಲಿನ್ಯವನ್ನು ಅಳೆಯಲು ಬೆಂಗಳೂರು ನಗರ ಮತ್ತು ಜಿಲ್ಲೆಗಳಾದ್ಯಂತ ಸಾಧನಗಳನ್ನು ಅಳವಡಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪಟಾಕಿ ಸಿಡಿಸುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹಬ್ಬದ ಮುನ್ನ ಮತ್ತು ನಂತರದ ಎಲ್ಲಾ ಏಳು ದಿನಗಳಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಅಳೆಯಲು ಎಲ್ಲಾ ಜಿಲ್ಲೆಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.