ಅಗ್ನಿಶಾಮಕ ದಳದ ವಿವಿಧ ದರ್ಜೆಯ 1547 ಹುದ್ದೆಗಳು ಭರ್ತಿ: ಸಚಿವ ಆರಗ ಜ್ಞಾನೇಂದ್ರ

ಅಗ್ನಿಶಾಮಕ ದಳದ ವಿವಿಧ ದರ್ಜೆಯ 1547 ಹುದ್ದೆಗಳು ಭರ್ತಿ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯ ಅಗ್ನಿಶಾಮಕ ದಳ ಬಲಪಡಿಸಲು ವಿವಿಧ ದರ್ಜೆಯ 1,547 ಹುದ್ದೆಗಳನ್ನು ಭರ್ತಿ ಮಾಡುವ ಜತೆಗೆ ತರಬೇತಿ ನೀಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.

ರಾಜಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶಿಷ್ಟ ಸೇವೆ ಸಲ್ಲಿಸಿದ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಅವಘಡ ಸಂದರ್ಭದಲ್ಲಿ ಅತ್ಯಂತ ಎತ್ತರದ ಕಟ್ಟಡವನ್ನೂ ಸುಲಭವಾಗಿ ತಲುಪಲೆಂದು 30 ಕೋಟಿ ರೂ. ವೆಚ್ಚದಲ್ಲಿ ಏರಿಯಲ್ ಲ್ಯಾಡರ್ ಇಲಾಖೆಗೆ ಒದಗಿಸಲಾಗಿದೆ. ನಾಗರಿಕರ ಸುರಕ್ಷತೆ, ಆಸ್ತಿಪಾಸ್ತಿ, ಸಾರ್ವಜನಿಕ ಸ್ವತ್ತುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

ವಿಪತ್ತು ಹಾಗೂ ತುರ್ತು ಸೇವೆಗಳ ಪಡೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಪ್ರತಿ ಮೂರು ಜಿಲ್ಲೆಗಳಿಗೆ ಒಂದು ಎಸ್‌ಡಿಆರ್‌ಎಫ್​ ನಿಯೋಜಿಸುವ ಯೋಜನೆ ರೂಪಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಪದಕ ಪ್ರದಾನ: ಜೀವದ ಹಂಗು ತೊರೆದು ಸಂಕಷ್ಟಕ್ಕೆ ಸಿಲುಕಿದ ಜನರನ್ನು ರಕ್ಷಿಸಿದ ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ, ಎಸ್‌ಡಿಆರ್‌ಎಫ್​ 61 ಸಿಬ್ಬಂದಿಗೆ ರಾಜ್ಯಪಾಲ ಥಾವರ್​ಚಂದ್ ಗೆಲ್ಹೋಟ್​ ಪದಕ ಪ್ರದಾನ ಮಾಡಿದರು. ಹಿರಿಯ ಅಧಿಕಾರಿಗಳಾದ ರಜನೀಶ್ ಗೋಯಲ್, ಅಮರ್‌ಕುಮಾರ್ ಪಾಂಡೆ ಇದ್ದರು.