ಸಕ್ಕರೆ ಸಚಿವರ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ರೈತರ ಆಕ್ರೋಶ

ಸಕ್ಕರೆ ಸಚಿವರ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ರೈತರ ಆಕ್ರೋಶ

ಬೆಂಗಳೂರು: ಕಬ್ಬಿಗೆ ಬೆಲೆ ನಿಗದಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಸಂಬಂಧಿಸಿದಂತೆ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕರೆದಿದ್ದ ಜಂಟಿ ಸಭೆಯಲ್ಲಿ 'ಕೋಡಿಹಳ್ಳಿ' ಕಿಡಿ ಹೊತ್ತಿಕೊಂಡು ಸ್ವಲ್ಪ ಹೊತ್ತು ಗೊಂದಲ ಸೃಷ್ಟಿಯಾಯಿತು.

ವಿಧಾನಸೌಧ ಮೂರನೇ ಮಹಡಿಯಲ್ಲಿ ಶನಿವಾರ ಕರೆದಿದ್ದ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್​ ಅವರು ಭಾಗವಹಿಸಿದ್ದನ್ನು ಕೆಲ ರೈತರು ಆಕ್ಷೇಪಿಸಿ, ಒಂದೋ ಅವರಿರಬೇಕು ಇಲ್ಲವೇ ನಾವಿರಬೇಕು ಎಂದು ಪಟ್ಟು ಹಿಡಿದು ಸಕ್ಕರೆ ಸಚಿವರಿಗೆ ಸ್ಪಷ್ಟಪಡಿಸಲು ಒತ್ತಾಯಿಸಿದರು. ಗುರುತರ ಆರೋಪ ಹೊತ್ತು ಕಳಂಕಿತರಾದ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂಬ ಮಾತನ್ನೂ ಸೇರಿಸಿದರು.

ಮುಖ್ಯಮಂತ್ರಿ ನಿರ್ದೇಶನದಂತೆ ಕಬ್ಬು ಬೆಲೆ, ಬಾಕಿ ಪಾವತಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ, ಬೇಡಿಕೆಗಳ ಕುರಿತು ಚರ್ಚಿಸಲು ಈ ಸಭೆ ಕರೆದಿದ್ದು, ಸಹಕರಿಸಬೇಕು ಎಂದು ಮುನೇನಕೊಪ್ಪ ಕೋರಿದರು.

ಶಿಕ್ಷೆ ಅನುಭವಿಸಲು ಸಿದ್ಧ:ಮಧ್ಯೆ ಪ್ರವೇಶಿಸಿದ ಕೋಡಿಹಳ್ಳಿ ಚಂದ್ರಶೇಖರ್​ ಮಾತನಾಡಿ, ವೈಯಕ್ತಿಕ ವಿಷಯ ಇಲ್ಲಿ ತರುವುದು ಬೇಡ.‌ ಆರೋಪದ ಕುರಿತು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವೆ. ಯಾವುದೇ ತನಿಖೆ ನಡೆಸಿ, ಸಾಬೀತಾದರೆ ಶಿಕ್ಷೆ ಅನುಭವಿಸಲು ಸಿದ್ಧ. ಎಲ್ಲರ ಮೇಲೂ ಆರೋಪ ಬಂದ ತಕ್ಷಣ ಅಪರಾಧಿಗಳಲ್ಲ. ವಿಷಯದ ಕಡೆ ಗಮನ ನೀಡೋಣ ಎಂದು ಕೋರಿದರು.

ಆದರೂ ಕೆಲವು ರೈತರು ತಮ್ಮ ನಿಲುವಿಗೆ ಅಂಟಿಕೊಂಡಾಗ ಕೋಡಿಹಳ್ಳಿ ಪರ ಇರುವ ರೈತರು ವಿರೋಧಿಸಿದರು. ಈ ವಿಷಯವಾಗಿ ರೈತರ ಎರಡು ಬಣಗಳ ಮಧ್ಯೆ ವಾಗ್ವಾದ ನಡೆಯಿತು. ರೈತ ಮುಖಂಡರಾದ ಸುನಂದಾ ಜಯರಾಂ ಇನ್ನಿತರರು ಮಧ್ಯೆ‌ ಪ್ರವೇಶಿಸಿ, ಸಭೆಯ ಮಹತ್ವ ಅರಿತು ವಿಷಯಗಳ ಚರ್ಚೆ, ಪರಿಹಾರ ಕಂಡುಕೊಳ್ಳೋಣ ಎಂದು ಮನವಿ ಮಾಡಿಕೊಂಡು ಗೊಂದಲಕ್ಕೆ ತೆರೆ ಎಳೆದರು.