Yashika Aannand: ಭೀಕರ ಅಪಘಾತ, ಗೆಳೆತಿಯ ಸಾವು: ನೋವು ತೋಡಿಕೊಂಡ ನಟಿ ಯಶಿಕಾ

Yashika Aannand: ಭೀಕರ ಅಪಘಾತ, ಗೆಳೆತಿಯ ಸಾವು: ನೋವು ತೋಡಿಕೊಂಡ ನಟಿ ಯಶಿಕಾ

ಅದು ಜುಲೈ 25, ತಮಿಳುನಾಡಿನ ಮಹಾಬಲಿಪುರಂ ಬಳಿ ಕಾರೊಂದು ಭೀಕರ ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಮೂವರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ, ಅವರಲ್ಲಿರುವ ಒಬ್ಬರು ಕಾಲಿವುಡ್ ನಟಿ ಯಶಿಕಾ ಆನಂದ್ ಎಂಬುದು ಸ್ಪಷ್ಟವಾಗಿತ್ತು. ಈ ಆಘಾತಕಾರಿ ಸುದ್ದಿ ಕೇಳಿ ಇಡೀ ಕಾಲಿವುಡ್​ ಸಿನಿ ಪ್ರಿಯರು ದಂಗಾಗಿದ್ದರು. ಇದರ ಬೆನ್ನಲ್ಲೇ ಕಾರಿನಲ್ಲಿದ್ದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ ಎಂಬ ಆಘಾತಕಾರಿ ಸುದ್ದಿಯೊಂದು ಅಪ್ಪಳಿಸಿತ್ತು. ಅದಾಗ್ಯೂ ನಟಿ ಹಾಗೂ ಇನ್ನೊಬ್ಬಳು ಫ್ರೆಂಡ್ ಅದೃಷ್ಟವಶಾತ್ ಪಾರಾಗಿದ್ದರು. ಅಲ್ಲದೆ ಇವರಿಬ್ಬರು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದೀಗ ಯಶಿಕಾ ಆನಂದ್ ಕೊಂಚ ಚೇತರಿಸಿಕೊಂಡಿದ್ದಾರೆ. ಆದರೆ ಆ ಭೀಕರ ಅಪಘಾತದ ಭೀತಿಯಿಂದ ಇನ್ನೂ ಹೊರಬಂದಿಲ್ಲ. ಅದರಲ್ಲೂ ಈ ಅಪಘಾತದಲ್ಲಿ ತನ್ನ ಸ್ನೇಹಿತೆ ಪಾವನಿ ಮೃತಪಟ್ಟಿರುವುದು ಕೇಳಿ ಖಿನ್ನತೆಗೆ ಒಳಗಾಗಿದ್ದಾರೆ. ಈ ದುರಂತದ ಬಗ್ಗೆಗಿನ ನನ್ನ ನೋವನ್ನು ಸುದೀರ್ಘ ಬರಹ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಯಶಿಕಾ ಬಿಚ್ಚಿಟ್ಟಿದ್ದಾರೆ. ಆ ಬರಹದ ಸಾರಾಂಶ ಹೀಗಿದೆ.

ಗೆಳೆತಿ ಪಾವನಿಯನ್ನು ನೆನೆಯುತ್ತಾ, ಜೀವಪೂರ್ತಿ ನಾನು ಪಶ್ಚಾತಾಪ ಪಡುವಂತಾಗಿದೆ. ನನಗೆ ಈಗ ಏನಾಗುತ್ತಿದೆ ಎಂದು ಸಹ ಹೇಳಲಾಗುತ್ತಿಲ್ಲ. ನಾನು ಇನ್ನೂ ಬದುಕಿರುವುದಕ್ಕೆ ಜೀವನಪರ್ಯಂತೆ ಪಶ್ಚಾತಾಪ ಪಡುತ್ತಿರುವೆ. ನನ್ನನ್ನು ಬದುಕಿಸಿದ ಆ ದೇವರಿಗೆ ಧನ್ಯವಾದ ಹೇಳಬೇಕಾ ಅಥವಾ ನನ್ನ ಗೆಳೆತಿಯನ್ನು ಕಿತ್ತುಕೊಂಡಿದ್ದಕ್ಕೆ ದ್ವೇಷಿಸಬೇಕಾ? ಒಂದೂ ಕೂಡ ಅರ್ಥವಾಗುತ್ತಿಲ್ಲ.

ನನ್ನ ಪಾವನಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ತೀನಿ. ದಯವಿಟ್ಟು ನೀನು ನನ್ನನ್ನು ಕ್ಷಮಿಸಿಬಿಡು. ನಿನ್ನ ಸಾವಿಗೆ ಕಾರಣವಾಗಿ ಇಡೀ ಕುಂಟುಬವನ್ನು ನಾನು ಸಂಕಷ್ಟಕ್ಕೆ ತಳ್ಳಿದೆ. ಪ್ರತಿ ಕ್ಷಣ ಕೂಡ ನಾನು ನಿನ್ನ ಮಿಸ್ ಮಾಡಿಕೊಳ್ಳಲಿದ್ದೇನೆ. ಬದುಕಿಳಿದಿರುವುದಕ್ಕೆ ಕೊನೆತನಕ ಪಶ್ಚಾತಾಪ ಪಡಲಿದ್ದೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ. ನೀನು ಮತ್ತೆ ನನ್ನ ಬಳಿಗೆ ಹಿಂತಿರುಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ !! ಒಂದು ದಿನ ನಿಮ್ಮ ಕುಟುಂಬ ಕೂಡ ನನ್ನನ್ನು ಕ್ಷಮಿಸುತ್ತದೆ ಎಂದು ಭಾವಿಸುತ್ತೇವೆ! ನಿನ್ನ ನೆನಪಿನಲ್ಲೇ ನಾನು ಎಂದೆಂದಿಗೂ ಕಾಲ ಕಳೆಯುತ್ತೇನೆ ಎಂದು ಯಶಿಕಾ ತನ್ನ ಮನದ ಯಾತನೆಯನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ಕುಡಿದು ಕಾರು ಓಡಿಸಿದ್ದಾರೆ ಎಂಬ ಆರೋಪಕ್ಕೂ ಯಶಿಕಾ ಪ್ರತಿಕ್ರಿಯಿಸಿದ್ದು, ನಾವು ಯಾರು ಕುಡಿದು ಗಾಡಿ ಓಡಿಸಿರಲಿಲ್ಲ ಎಂದು ಪೊಲೀಸರೇ ಅಧಿಕೃತವಾಗಿ ಹೇಳಿದ್ದಾರೆ. ಹೀಗಿದ್ದು ಕೂಡ, ಕೆಲವರು ನಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ತಮಗೆ ತೋಚಿದಂತೆ ಮಾತನಾಡ್ತಿದ್ದಾರೆ. ಸದ್ಯದ ನನ್ನ ಪರಿಸ್ಥಿತಿ ಏನೂ ಅಂತ ಕೂಡ ಇವರಿಗೆಲ್ಲಾ ಗೊತ್ತಿಲ್ಲ. ನನ್ನ ಬಲಗಾಲು ಮುರಿತಕ್ಕೊಳಗಾಗಿ ಸರ್ಜರಿ ಮಾಡಲಾಗಿದೆ.

ಇನ್ನು 5 ತಿಂಗಳುಗಳ ಕಾಲ ನನಗೆ ನಡೆಯಲು, ನಿಲ್ಲಲು ಆಗುವುದಿಲ್ಲ. ದಿನವಿಡೀ ಹಾಸಿಗೆಯಲ್ಲೇ ಇರಬೇಕು. ಅಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿಕೊಳ್ಳಬೇಕು. ಮಲಗಿದ್ದಲಿಂದ ತಿರುಗಲು ಕೂಡ ಸಾಧ್ಯವಾಗುತ್ತಿಲ್ಲ. ಇವೆಲ್ಲವೂ ಸೂಕ್ಷ್ಮ ವಿಚಾರ. ಇನ್ಮುಂದೆ ಸುಳ್ಳು ಸುದ್ದಿ ಹಬ್ಬಿಸುವ ಮುನ್ನ ಸ್ವಲ್ಪನಾದರೂ ಮಾನವೀಯತೆ ತೋರಿಸುತ್ತೀರಿ ಎಂದು ಭಾವಿಸುವೆ. ಅದೃಷ್ಟವಶಾತ್ ನನ್ನ ಮುಖಕ್ಕೆ ಯಾವುದೇ ಗಾಯವಾಗಿಲ್ಲ. ಇದನ್ನು ಪುನರ್ಜನ್ಮ ಎಂದೇ ಹೇಳಬಹುದು. ಆದರೆ ದೈಹಿಕ ಮತ್ತು ಮಾನಸಿಕ ಗಾಯಗಳನ್ನು ಮಾಡುವ ಮೂಲಕ ದೇವರು ನನಗೆ ಶಿಕ್ಷೆ ನೀಡಿದ್ದಾನೆ. ನಾನು ಕಳೆದುಕೊಂಡಿರುವುದ ಮುಂದೆ ಇದೆಲ್ಲಾ ಏನೂ ಅಲ್ಲ ಎಂದು ಯಶಿಕಾ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.