ಚಿತ್ರದುರ್ಗ; ಬೆಳೆದು ನಿಂತಿದ್ದ 2 ಎಕರೆ ಬಾಳೆ ತೋಟ ಬೆಂಕಿಗಾಹುತಿ
ಚಿತ್ರದುರ್ಗ, ಜೂನ್ 11; ಫಸಲಿಗೆ ಬಂದಿದ್ದ ಬಾಳೆ ತೋಟ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹಾನಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀಕ್ಕೆನಹಳ್ಳಿ ಗ್ರಾಮದ ರೈತ ಮಂಜಪ್ಪನಿಗೆ ಸೇರಿದ 2 ಎಕರೆ ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎನ್ನುವಂತಾಗಿದೆ. ಕೊರೊನಾ ಮಧ್ಯೆಯೂ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಆಕಸ್ಮಿಕ ಬೆಂಕಿ ಸಂಕಷ್ಟ ತಂದಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಜಮೀನಿನ ಮಹಿಳೆಯೊಬ್ಬರು "ನಾವು ಮನೆಯಲ್ಲಿ ಇದ್ದೆವು, ಬೆಂಕಿ ಹೇಗೆ ಹೊತ್ತಿಕೊಂಡು ತೋಟ ಸುಟ್ಟು ಹೋಯಿತು ಎಂದು ತಿಳಿದಿಲ್ಲ. ಬೆಳಗ್ಗೆ ಹೊಲಕ್ಕೆ ಹೋಗಿ ನೋಡಿದಾಗ ಬಾಳೆ ತೋಟ ಸಂಪೂರ್ಣವಾಗಿ ಸುಟ್ಟು ಹಾನಿಯಾಗಿರುವುದು ಕಂಡು ಬಂದಿತು. ಕೋಳಿಗೊಬ್ಬರ, ಡ್ರಿಪ್, ಔಷಧಿ ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದವು. ಈಗ ನೋಡಿದರೆ ಬೆಳೆ ಸುಟ್ಟು ಹೋಗಿದೆ" ಎಂದು ಅವಲುತ್ತು ಕೊಂಡರು.
ಈ ಘಟನೆ ಮಂಗಳವಾರ ನಡೆದಿದ್ದು ತೋಟ ಸುಟ್ಟು ಹೋದ ನೋವಿನಲ್ಲಿ ರೈತ ಯಾರಿಗೂ ತಿಳಿಸಿಲ್ಲ. ತಡವಾಗಿ ಬೆಳಕಿಗೆ ಬಂದಿದ್ದರಿಂದ ವಿಷಯ ತಿಳಿದ ತಕ್ಷಣ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಮೀನಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.