ಅತ್ಯಾಧುನಿಕಗೊಳ್ಳುತ್ತಿದೆ ಭಾರತೀಯ ಸೇನೆ
ನವದೆಹಲಿ: ಭಾರತೀಯ ಸೇನೆ ಸದ್ದಿಲ್ಲದೇ ಅತ್ಯಾಧುನಿಕಗೊಳ್ಳುತ್ತಿದೆ, ಬಲಿಷ್ಠಗೊಳ್ಳುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನೆಯಲ್ಲಿನ ಘಾತಕಶಕ್ತಿ ಹೆಚ್ಚಿದೆ, ದೇಶೀಯ ನಿರ್ಮಿತ ವಿಚಕ್ಷಣೆ ಮತ್ತು ದಾಳಿ ಡ್ರೋನ್‌ಗಳು, ವೈಮಾನಿಕ ಶಸ್ತ್ರಾಸ್ತ್ರಗಳು, ರಾತ್ರಿಯುದ್ಧ, ಗುರಿಯನ್ನು ನಿಖರವಾಗಿ ಛೇದಿಸಬಲ್ಲ ಸಾಧನಗಳನ್ನು ಸೇನೆಗೆ ಸೇರಿಸಿಕೊಳ್ಳಲಾಗಿದೆ.
ಒಂದು ಕಡೆ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿ ಆಧುನೀಕರಣಗೊಳಿಸಲಾಗುತ್ತಿದೆ. ಮತ್ತೂಂದು ಕಡೆ 12 ಲಕ್ಷವಿರುವ ಬೃಹತ್, ಬಲಿಷ್ಠ ಸೇನಾಪಡೆಯನ್ನು ಪುನರ್ರಚನೆ ಮಾಡಲಾಗುತ್ತಿದೆ. ಬಹಳ ಸಕ್ರಿಯವಲ್ಲದ, ಅನಗತ್ಯ ಯೋಧರ ಪ್ರಮಾಣವನ್ನು ಕಡಿಮೆಮಾಡಲು ಚಿಂತಿಸಲಾಗಿದೆ. ವೇತನ ಮತ್ತು ಪಿಂಚಣಿ ಪ್ರಮಾಣ ವಿಪರೀತ ಏರುತ್ತಿರುವುದರಿಂದ ಅದನ್ನು ಕಡಿಮೆ ಮಾಡಲು ಯತ್ನ ಸಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾರೀ ಪ್ರಮಾಣದ ಒಪ್ಪಂದಗಳಿಗೆ ಸಹಿ:
ಸೇನೆ ಭಾರೀ ಪ್ರಮಾಣದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಶಸ್ತ್ರಾಸ್ತ್ರ ಪಡೆದುಕೊಳ್ಳಲು 91,238 ಕೋ.ರೂ. ಮೌಲ್ಯದ 61 ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ದೇಶೀಯ ಸರ್ಕಾರಿ ಕಂಪನಿಗಳೊಂದಿಗೆ 76,544 ಕೋ.ರೂ. ಮೌಲ್ಯದ 44 ಒಪ್ಪಂದಗಳು ಸೇರಿವೆ. ಮಾಮೂಲಿ ಖರೀದಿಗಳ ಜೊತೆಗೆ ತುರ್ತು ಹಿನ್ನೆಲೆಯಲ್ಲಿ 68 ಖರೀದಿ ಒಪ್ಪಂದಗಳಾಗಿವೆ. ಇನ್ನೂ 84 ತುರ್ತು ಖರೀದಿ ಒಪ್ಪಂದಗಳು ಜಾರಿಯಲ್ಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ ಎನ್ನಲಾಗಿದೆ.