ಪ್ರತ್ಯೇಕ ಪ್ರಕರಣ: ಶಾಸಕ ಓಲೇಕಾರ್, ಎಂ.ಪಿ. ಕುಮಾರಸ್ವಾಮಿಗೆ ಜೈಲು

ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಬಿಜೆಪಿಯ ಇಬ್ಬರು ಶಾಸಕರಿಗೆ ಜನಪ್ರತಿನಿಧಿ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿವೆ. ಶಾಸಕರ ಅನುದಾನದ ಸರಕಾರಿ ಕಾಮಗಾರಿಗಳ ಗುತ್ತಿಗೆಯನ್ನು ಪುತ್ರರಿಗೆ ಕೊಡಿಸಿ ಸ್ವಜನ ಪಕ್ಷಪಾತ ಎಸಗಿದ ಆರೋಪದಲ್ಲಿ ನೆಹರು ಓಲೇಕಾರ್ ಸೇರಿ 9 ಮಂದಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 2 ಸಾವಿರ ದಂಡ ವಿಧಿಸಲಾಗಿದೆ.
ಹಾಗೆಯೇ 8 ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಜನ ಪ್ರತಿ ನಿಧಿಗಳ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹಾವೇರಿ ಶಾಸಕ ನೆಹರು ಸಿ. ಓಲೇಕಾರ್ ಅವರ ಪುತ್ರರು ಹಾಗೂ ಗುತ್ತಿಗೆದಾರರಾದ ಮಂಜುನಾಥ್ ಓಲೇಕಾರ್, ದೇವರಾಜ್ ಓಲೇಕಾರ್, ನಿವೃತ್ತ ಅಧಿಕಾರಿಗಳಾದ ಕೆ.ಎಚ್. ರುದ್ರ ಪ್ಪ, ಕೆ.ಎಚ್. ಕಾಳಪ್ಪ, ಕೆ. ಮಂಜುನಾಥ್ (ಮೃತರು), ಪುರಸಭೆಯ ಎಸ್‌ಡಿಸಿ ಶಿವಕುಮಾರ್ ಪುಟ್ಟಯ್ಯ, ನಿವೃತ್ತ ಅಧಿಕಾರಿ ಚಂದ್ರಮೋಹನ್, ನಗರಸಭೆ ಸಹಾಯಕ ಎಂಜಿನಿಯರ್ ಕೃಷ್ಣ ನಾಯಕ್‌ಗೆ ತಲಾ ಎರಡು ಸಾವಿರ ರೂ. ದಂಡ ಹಾಗೂ ಎರಡು ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಾಸಕರ ಅನುದಾನದಡಿಯಲ್ಲಿ ಕ್ಷೇತ್ರಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆ ಆಗಿತ್ತು. ಆಗ ಶಾಸಕ ನೆಹರು ಓಲೇಕರ್ ಅಭಿವೃದ್ಧಿ ಕಾಮಗಾರಿಗೆ 50 ಲಕ್ಷ ರೂ. ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಹಣ ಕೂಡ ಬಿಡುಗಡೆ ಆಗಿತ್ತು. ಅಲ್ಲದೆ ಕ್ಷೇತ್ರದಲ್ಲಿ ನಡೆದ 10 ಲೋಕೋಪಯೋಗಿ ಕಾಮಗಾರಿ ಗುತ್ತಿಗೆಯನ್ನು ಪುತ್ರರಿಗೆ ನೀಡುವಂತೆ ಶಿಫಾರಸು ಮಾಡಿದ ಮೇರೆಗೆ ಮೊದಲ ಪುತ್ರ ಮಂಜುನಾಥ್‌ಗೆ ಕೊಡಿಸಿದ್ದರು.
ಇನ್ನು ಶಿವಮೊಗ್ಗದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯ ರಾಗಿದ್ದು, ಮಂಡಳಿ ಕಾರ್ಯದರ್ಶಿಗೆ ಪತ್ರ ಬರೆದು, ಸವಣೂರು ತಾಲೂಕಿನ ಎಂಟು ಅಭಿವೃದ್ಧಿ ಕಾಮಗಾರಿಗೆ 30 ಲಕ್ಷ ರೂ. ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿದ್ದರು. ಈ ಪೈಕಿ ಒಂದು ಕಾಮಗಾರಿ ಗುತ್ತಿಗೆಯನ್ನು ಎರಡನೇ ಪುತ್ರ ದೇವರಾಜ್‌ಗೆ ಕೊಡಿಸಲಾಗಿತ್ತು. ಹೀಗೆ ಇತರ ಆರೋಪಿಗಳ ಜತೆ ಸೇರಿ ಸರಕಾರಿ ಕಾಮಗಾರಿಗಳನ್ನು ತಮ್ಮ ಸಂಬಂಧಿಗಳು ಹಾಗೂ ಪರಿಚಯಸ್ಥರಿಗೆ ಕೊಡಿಸಲು ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿ ಹಾವೇರಿಯ ಶಶಿಧರ್ ಮಹದೇವಪ್ಪ ಹಳ್ಳಿಕೇರಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಎಲ್ಲ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಮೂಡಿಗೆರೆ ಶಾಸಕರಿಗೆ 4 ವರ್ಷ ಜೈಲು
ಎಂಟು ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ ಗಳಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾ ರಸ್ವಾಮಿಗೆ ಜನಪ್ರತಿನಿಧಿಗಳ ವಿಶೇ ಷ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬವರಿಂದ ಸಾಲ ಪಡೆದಿದ್ದು, 1.38 ಕೋಟಿ ರೂ. ಬಾಕಿ ಇತ್ತು. ಅದಕ್ಕೆ ಪ್ರತಿಯಾಗಿ ಶಾಸಕರು ಸಾಲದ ಕಂತುಗಳೆಂಬಂತೆ ಎಂಟು ಚೆಕ್‌ಗಳನ್ನು ನೀಡಿದ್ದರು. ಎಲ್ಲ ಚೆಕ್‌ಗಳು ಬೌನ್ಸ್ ಆಗಿತ್ತು. ಅದನ್ನು ಪ್ರಶ್ನಿಸಿದ ಹೂವಪ್ಪ ಗೌಡ ಕೋರ್ಟ್ ಮೊರೆ ಹೋಗಿದ್ದರು. ಬಳಿಕ ಆರೋಪಿತರು ಶಾಸಕರಾದ್ದರಿಂದ ಜನಪ್ರ ತಿನಿಧಿ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಆಗಿತ್ತು. ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಕೋರ್ಟ್, ಆರೋಪಿ ಶಾಸಕರಿಗೆ ನಿಗದಿತ ಅವಧಿಯಲ್ಲಿ 1.38 ಕೋಟಿ ರೂ. ಸಾಲ ಮರು ಪಾವತಿ ಮಾಡಬೇಕು. ಇಲ್ಲವಾದಲ್ಲಿ ತಲಾ ಪ್ರಕರಣದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶ ನೀಡಿದೆ.