ಸಿಎಂ ಭೇಟಿ ಸಾಧ್ಯವಾಗದೇ ಬಿಜೆಪಿ ಬಿಡಲು ಮುಂದಾಗಿದ್ದ ಶಾಸಕನ ಮನವೊಲಿಸಿದ ಪಕ್ಷದ ನಾಯಕರು
ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಅಸಮಾಧಾನಗೊಂಡಿದ್ದು, ಅವರೊಂದಿಗೆ ಪಕ್ಷದ ನಾಯಕರು ಚರ್ಚೆ ನಡೆಸಿದ್ದಾರೆ, ಬಿಜೆಪಿಯಲ್ಲೇ ಮುಂದುವರೆಯುವ ಬಗ್ಗೆ ಇಂದು ಚಿಂಚನಸೂರ್ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ.
ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೊಂದಿಗೆ ಚಿಂಚನಸೂರ್ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಸಾಧ್ಯವಾಗದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿಯಾಗಿ ಚಿಂಚನಸೂರ್ ಚರ್ಚೆ ನಡೆಸಿದ್ದಾರೆ. ನಿನ್ನೆ ಅರ್ಧ ಗಂಟೆ ಕಾಲ ಇಬ್ಬರು ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಬಳಿಕ ನಳಿನ್ ಕುಮಾರ್ ಕಟೀಲು ಅವರೊಂದಿಗೆ ಫೋನ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಸಿಎಂ ಭೇಟಿಯಾಗಲು ನಮಗೆ ಸಾಧ್ಯವಾಗುತ್ತಿಲ್ಲ. ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ರಾತ್ರಿ 2 ಗಂಟೆವರೆಗೂ ಮಾತನಾಡಿಸುತ್ತಿದ್ದರು. ಈ ವಿಷಯಕ್ಕೆ ನನಗೆ ಬಹಳ ಬೇಸರ ಆಗಿದೆ ಎಂದು ಚುಂಚನಸೂರ್ ಹೇಳಿದ್ದಾರೆ.
ನಿನ್ನೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್ ಸೇರಿ ಎಲ್ಲರೂ ಚರ್ಚಿಸಿದ್ದಾರೆ. ನನ್ನ ಅಭಿಪ್ರಾಯ ಬದಲಾಯಿಸಿಕೊಂಡಿದ್ದೇನೆ ಎಂದು ಚಿಂಚನಸೂರ್ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರವಾಣಿಯಲ್ಲಿ ಚಿಂಚನಸೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಸಿಎಂ ಜೊತೆಗೆ ಫೋನ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಕಟೀಲು, ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಖೂಬಾ ಅವರ ಮೂಲಕ ಚಿಂಚನಸೂರ್ ಅವರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಲಾಗಿದೆ ಎಂದು ಹೇಳಲಾಗಿದೆ.