ಮಾದಪ್ಪನ ಕಾಣಲು ಭಕ್ತರ ಪಾದಯಾತ್ರೆ
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಇದೇ 17ರಿಂದ ನಡೆಯುವ ಐದು ದಿನಗಳ ಮಹಾಶಿವರಾತ್ರಿ ಜಾತ್ರೆಗೆ ಭಕ್ತರು ಸಾಗರೋಪಾದಿಯಲ್ಲಿ ಪಾದಯಾತ್ರೆಯಲ್ಲಿ ಬರುತ್ತಿದ್ದು, ಸೋಮವಾರ ಸಾವಿರಾರು ಭಕ್ತರು ಕಾವೇರಿ ನದಿ ದಾಟಿ ಬೆಟ್ಟದತ್ತ ಕಾಲ್ನಡಿಗೆಯಲ್ಲಿ ಸಾಗಿದರು.
ಬೆಟ್ಟದಲ್ಲಿ ನಡೆಯುವ ವರ್ಷದ ಮೊದಲನೇ ಜಾತ್ರೆಗೆ ರಾಜ್ಯದ ನಾನಾ ಕಡೆಗಳಿಂದ ಹಾಗೂ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಮಾದಪ್ಪನಿಗೆ ಹರಕೆಹೊರುವ ಲಕ್ಷಾಂತರ ಭಕ್ತರು ಊರಿಂದ ಕಾಲ್ನಡಿಗೆಯಲ್ಲೇ ಬೆಟ್ಟಕ್ಕೆ ತೆರಳುವುದು ಶತಮಾನಗಳಿಂದಲೂ ರೂಢಿಯಲ್ಲಿರುವ ಸಂಪ್ರದಾಯ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾದಪ್ಪನಿಗೆ ಹರಕೆ ಹೊರುವ ಭಕ್ತರು ಸತತ ಐದು ದಿನಗಳ ಕಾಲ ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳಿ, ಮಹದೇಶ್ವರಸ್ವಾಮಿಯ ದರ್ಶನ ಮಾಡಿ ಹರಕೆ ತೀರಿಸುತ್ತಾರೆ.
ಉಳಿದ ಸಮಯದಲ್ಲೂ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುತ್ತಾರಾದರೂ, ಶಿವರಾತ್ರಿಯ ಸಮಯದಲ್ಲಿ ಬರುವಷ್ಟು ಭಕ್ತರು ಯಾವತ್ತೂ ಬರುವುದಿಲ್ಲ. ಬೆಂಗಳೂರು, ಕೋಲಾರ, ರಾಮನಗರ, ಕನಕಪುರ, ಮಂಡ್ಯ ಜಿಲ್ಲೆಯಿಂದ ಬರುವ ಭಕ್ತರು ಕಾವೇರಿ ನದಿಯನ್ನು ದಾಟಿಕೊಂಡು ಜಿಲ್ಲೆ ಪ್ರವೇಶಿಸುತ್ತಾರೆ. ನಂತರ ಕಾಡಿನಲ್ಲೇ ಹೆಜ್ಜೆ ಹಾಕುತ್ತಾ ಬೆಟ್ಟ ತಲುಪುತ್ತಾರೆ.
ಸೋಮವಾರದಿಂದ ಪಾದಯಾತ್ರೆಯಲ್ಲಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನದಿ ದಾಟುತ್ತಾರೆ ಎಂಬ ಕಾರಣಕ್ಕೆ ನೀರಿನ ಹರಿವನ್ನೂ ಕಡಿಮೆ ಮಾಡಲಾಗಿದೆ. ಇನ್ನೂ ಎರಡು ದಿನಗಳ ಕಾಲ ಹೆಚ್ಚಿನ ಸಂಖ್ಯೆ ಭಕ್ತರು ನದಿ ದಾಟಿ ಬೆಟ್ಟದತ್ತ ಸಾಗಲಿದ್ದಾರೆ.
ವಿವಿಧ ಜಿಲ್ಲೆಗಳಿಂದ ಭಾನುವಾರದಿಂದ ಪಾದಯಾತ್ರೆ ಆರಂಭಿಸಿರುವ ಭಕ್ತರು ಸೋಮವಾರ ಕಾವೇರಿ ವನ್ಯಧಾಮದ ಸಂಗಮ ವಲಯದ ಮೂಲಕ ಕಾವೇರಿ ನದಿ ದಾಟಿ ಹನೂರು ವನ್ಯಜೀವಿ ವಲಯದ ಬಸವನಕಡಕ್ಕೆ ಬಂದರು. ಕೆಲವು ಭಕ್ತರು ತಮ್ಮ ಪಾದಯಾತ್ರೆಮುಂದುವರೆಸಿದರೆ ಇನ್ನು ಕೆಲವರು ನದಿ ತೀರದಲ್ಲಿ ಸೋಮವಾರ ರಾತ್ರಿ ನದಿ ತೀರದಲ್ಲಿ ವಿಶ್ರಾಂತಿ ಪಡೆದು ಮಂಗಳವಾರ ಬೆಳಿಗ್ಗೆಯಿಂದ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ.
'ಎಂಟು ವರ್ಷಗಳಿಂದ ಬರಿಗಾಲಿನಲ್ಲಿ ಮಾದಪ್ಪನ ಬೆಟ್ಟಕ್ಕೆ ನಡೆದುಕೊಂಡೇ ಹೋಗುತ್ತಿದ್ದೇನೆ. ಇದರಿಂದ ನನ್ನ ಕಷ್ಟಗಳೆಲ್ಲವೂ ಪರಿಹಾರವಾಗಿದೆ. ಶಕ್ತಿ ಇರುರುವವರೆಗೂ ಕಾಲ್ನಡಿಗೆಯಲ್ಲೇ ಬೆಟ್ಟಕ್ಕೆ ಹೋಗುತ್ತೇನೆ. ಮೊದಲೆಲ್ಲ ಮನೆಯಲ್ಲೇ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದೆವು. ಆದರೆ ಈಗ ಅಲ್ಲಲ್ಲಿ ದಾನಿಗಳು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಈಗ ಕಾಲ್ನಡಿಗೆಯಲ್ಲಿ ಹೆಚ್ಚು ಜನರು ಬರುತ್ತಿರುವುದು ಸಂತಸದ ವಿಚಾರ' ಎಂದು ಬನ್ನೇರುಘಟ್ಟದಿಂದ ಬಂದಿದ್ದ ದೇವಮ್ಮ 'ಪ್ರಜಾವಾಣಿ'ಗೆ ತಿಳಿಸಿದರು.
ದಾನಿಗಳಿಂದ ಊಟದ ವ್ಯವಸ್ಥೆ
ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ನೀಡುವುದಕ್ಕಾಗಿ ಸಂಘ ಸಂಸ್ಥೆಗಳು, ದಾನಿಗಳು ಅಲ್ಲಲ್ಲಿ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ.
ಶಾಗ್ಯ ಕಳ್ಳಿದೊಡ್ಡಿ ಗ್ರಾಮದಲ್ಲಿ ಮೂರು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ರಾಮನಗರ ಜಿಲ್ಲೆಯ ದಾನಿಗಳು ಅರಣ್ಯದಿಂದ ಹೊರಗೆ ಶಾಮಿಯಾನ ಹಾಕಿ ಅಡುಗೆ ಸಿದ್ಧಪಡಿಸಿ ಭಕ್ತರ ಹಸಿವೆಯನ್ನು ನೀಗಿಸುತ್ತಿದ್ದಾರೆ.
ಅಧಿಕಾರಿಗಳ ಎಚ್ಚರಿಕೆ: ಕಳೆದ ವರ್ಷ ಭಕ್ತರು ಪ್ಲಾಸಿಕ್ ಬಾಟಲಿ ಹಾಗೂ ಊಟದ ತಟ್ಟೆಗಳನ್ನು ನದಿ ತೀರ ಹಾಗೂ ಅರಣ್ಯದೊಳಗೆ ಎಲ್ಲೆಂದರಲ್ಲಿ ಬಿಸಾಡಿದ್ದರು. ಇದನ್ನು ತಪ್ಪಿಸುವುದಕ್ಕಾಗಿ ಅರಣ್ಯ ಇಲಾಖೆ ನದಿ ತೀರ ಹಾಗೂ ದಾರಿಯುದ್ದಕ್ಕೂ ಅಲ್ಲಲ್ಲಿ ಕಸ ಹಾಕಲು ಜಾಗವನ್ನು ಗುರುತಿಸಿ ತಾತ್ಕಾಲಿಕ ಕಸದ ಬುಟ್ಟಿಗಳನ್ನು ಇರಿಸಲಾಗಿದೆ.
ನದಿ ದಾಟಿ ಬರುವ ಭಕ್ತರು ಅರಣ್ಯ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುವುದರ ಜತೆಗೆ ಸಂಜೆ 6 ಗಂಟೆ ಬಳಿಕ ಪಾದಯಾತ್ರೆ ಮುಂದುವರಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸಂಜೆಯೇ ನದಿ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೀಡು ಬಿಟ್ಟಿದ್ದು ಮಂಗಳವಾರ ಭಕ್ತರ ಸಂಖ್ಯೆ ದ್ವಿಗುಣಗೊಳ್ಳಲಿದೆ.