ಬಿಜೆಪಿ ಟಿಕೆಟ್ ಕೊಡುತ್ತೋ ಇಲ್ವೋ ಗೊತ್ತಿಲ್ಲ; ಚುನಾವಣೆಗೆ ಪ್ರಮೋದ್ ಮಧ್ವರಾಜ್ ಎಲ್ಲೇ ನಿಂತ್ರು ಸೋಲಿಸಿ!

ಬಿಜೆಪಿ ಟಿಕೆಟ್ ಕೊಡುತ್ತೋ ಇಲ್ವೋ ಗೊತ್ತಿಲ್ಲ; ಚುನಾವಣೆಗೆ ಪ್ರಮೋದ್ ಮಧ್ವರಾಜ್ ಎಲ್ಲೇ ನಿಂತ್ರು ಸೋಲಿಸಿ!

ಡುಪಿ: ನಮ್ಮ ಆಡಳಿತದಲ್ಲಿ ಪ್ರಮೋದ್ ಮಧ್ವರಾಜ್ ಅವರನ್ನು ಮಂತ್ರಿ ಮಾಡಿದೆವು. ಆದರೆ ಪಕ್ಷಕ್ಕೆ ದ್ರೋಹ ಮಾಡಿದ ಅವರು ಬಿಜೆಪಿಗೆ ಹೋದರೂ, ಒಬ್ಬನೇ ಒಬ್ಬ ಕಾರ್ಯಕರ್ತ ಅವರ ಹಿಂದೆ ಹೋಗಿಲ್ಲ. ತಂದೆ, ತಾಯಿ, ಮಗ ಎಲ್ಲರೂ ಮಂತ್ರಿಗಳಾದರು. ಅವರ ಇಡೀ ಕುಟುಂಬಕ್ಕೆ ಪಕ್ಷ ಎಲ್ಲವನ್ನೂ ನೀಡಿದೆ.

ಹೀಗಿದ್ದೂ ಪ್ರಮೋದ್ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಪ್ರಮೋದ್ ಮಧ್ವರಾಜ್​ಗೆ ಬಿಜೆಪಿ ಟಿಕೆಟ್ ಕೊಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಯಾವುದೇ ಜಾಗದಲ್ಲಿ ಪ್ರಮೋದ್ ನಿಂತರೂ ಸೋಲಿಸಿ ಎಂದು ಡಿಕೆಶಿ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಜ್ಯದ ಜನರ ಸಮಸ್ಯೆ ಅರಿತು, ಆಚಾರ, ವಿಚಾರ, ಅಭಿಪ್ರಾಯ ತಿಳಿದು ಸ್ಪಂದನೆ ನೀಡಲು ಪ್ರಜಾಧ್ವನಿ ಯಾತ್ರೆ ಕೈಗೊಂಡಿದ್ದೇವೆ. ಅಂದು ಕರಾವಳಿಯ ಎಲ್ಲಾ ಸ್ಥಾನದಲ್ಲಿ ನಮ್ಮ ಶಾಸಕರಿದ್ದರು. ಆದರೆ ಇಂದು ಕೇವಲ ಒಬ್ಬ ಶಾಸಕ ಮಾತ್ರ ಇದ್ದಾರೆ. ಈ ವಿಚಾರ ಮನಸ್ಸಿಗೆ ನೋವಾಗುತ್ತದೆ. ಅಂತೆಯೇ ಇತಿಹಾಸ ಮರೆತವರು ಯಾರೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ಡಿಕೆಶಿ ಆಕ್ರೋಶ ಹೊರಹಾಕಿದರು.

ಬಿಜೆಪಿ ಎಲ್ಲಾ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡುತ್ತಿದೆ. ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯನ್ನು ಗುಜುರಿಗೆ ಇಟ್ಟಿರುವುದು ದುರಂತ. ಡಬ್ಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಆದರೆ ಜನರಿಗೆ ನೀಡಿರುವ ಯಾವೊಂದು ಆಶ್ವಾಸನೆಯ ಮಾತನ್ನೂ ಉಳಿಸಿಕೊಂಡಿಲ್ಲ. ಮೀನುಗಾರರಿಗೆ ಸರಿಯಾಗಿ ಸೀಮೆಎಣ್ಣೆ ಒದಗಿಸಿಲ್ಲ. ಗ್ಲೋಬಲ್ ಹೂಡಿಕೆದಾರರ ಸಮಾವೇಶದಿಂದ ಕರಾವಳಿಗೆ ಏನು ಸಿಕ್ಕಿತ್ತು? ಯಾರು ಕೂಡಾ ಇಲ್ಲಿ ಹೂಡಿಕೆ ಮಾಡಲು ತಯಾರಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ಕೋಮು ಗಲಭೆ ವಿಷ ಭಿತ್ತಿದ ಕಾರಣ ಮಕ್ಕಳು ವಿದ್ಯಾಭ್ಯಾಸಕ್ಕೆ ಬರದಂತಾಗಿದೆ. ಬಿಜೆಪಿ ಕಾರ್ಯಕರ್ತರು ತ್ರಿಶೂಲ ಹಿಡಿದು ಹೋರಾಟ ಮಾಡಿ ಸಾಯುತ್ತಿದ್ದಾರೆ. ಗಲಾಟೆಯಲ್ಲಿ ಯಾವೊಬ್ಬ ಮಂತ್ರಿ ಮಗನಿಗೂ ಏನೂ ಆಗುವುದಿಲ್ಲ. ಆದರೆ ಬಡಜನರ ಮಕ್ಕಳು ಸಾಯುತ್ತಿದ್ದಾರೆ. ಇದಕ್ಕೆ ಬಿಎಸ್​​ವೈ, ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಉತ್ತರಿಸಬೇಕಿದೆ ಎಂದು ಹೇಳಿದರು.