ಒಳ್ಳೆಯ ಕೆಲಸಕ್ಕೆ ಒಂದು ಕಾರಣ ಸಾಕು. ಎನ್ನುತ್ತಲೇ ಜಿಲ್ಲಾಧಿಕಾರಿಗಳ ವಿರುದ್ಧ ಸಿಎಂ ಗರಂ

ಒಳ್ಳೆಯ ಕೆಲಸಕ್ಕೆ ಒಂದು ಕಾರಣ ಸಾಕು. ಎನ್ನುತ್ತಲೇ ಜಿಲ್ಲಾಧಿಕಾರಿಗಳ ವಿರುದ್ಧ ಸಿಎಂ ಗರಂ

ಬೆಂಗಳೂರು: ಯಾವುದೇ ಕೆಲಸ ಮಾಡಬಾರದು ಎಂದರೆ‌ ನೂರೊಂದು ಕಾರಣಗಳು ಸಿಗುತ್ತವೆ. ಆದರೆ‌ ಒಳ್ಳೆಯ ಕೆಲಸಕ್ಕೆ ಒಂದು ಕಾರಣ ಸಾಕು ಎಂದು ಜಿಲ್ಲಾಧಿಕಾರಿಗಳಿಗೆ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಿವಿಮಾತು‌ ಹೇಳಿದರು.

ವಿಧಾನಸೌಧ ಸಮ್ಮೇಳನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ, ಆಯವ್ಯಯ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿದೆ.

ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು, ವರ್ಷಾಂತ್ಯದಲ್ಲಿ ಗುರಿ ಸಾಧಿಸಿ ಎಂದು ಸೂಚಿಸಿದರು.

ಒಬ್ಬ ಐಎಎಸ್ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಮಹತ್ವಪೂರ್ಣ ಅವಕಾಶ. ಜಿಲ್ಲೆಯಲ್ಲಿ ನೀವು ಯಾವ ರೀತಿ ಹೆಜ್ಜೆ ಗುರುತು ಬಿಡುತ್ತೀರಿ ಎನ್ನುವುದು ಮುಖ್ಯವಾದುದು. ಈಗ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ. ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು. ಸಮಯಪ್ರಜ್ಞೆ, ಸ್ಥಿತ ಪ್ರಜ್ಞತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದ ಸಿಎಂ, ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ ಜಾಗದಲ್ಲಿ ಬೇರೆಯವರನ್ನು ಕೂರಿಸೋದು ಗೊತ್ತು ಎಂದು ಎಚ್ಚರಿಸಿದರು.

ಪ್ರವಾಹ ಪರಿಣಾಮ, ಪರಿಹಾರ ವಿತರಣೆ ಪ್ರಗತಿ ಪರಾಮರ್ಶೆ ವೇಳೆ ಪರಿಹಾರ ವಿತರಣೆಯಲ್ಲಿ ವಿಳಂಬದ ಲೋಪ ಗುರುತಿಸಿದ ಸಿಎಂ, ಯುದ್ಧೋಪಾದಿಯಲ್ಲಿ ಪರಿಹಾರ ವಿತರಣೆಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಈ ಲೋಪಗಳಿಗೆ ನೀವೇ ಹೊಣೆ ಎಂದು ಚಾಟಿ ಬೀಸಿದರು.

ಡಿಸಿಗಳು ಕಚೇರಿಯಲ್ಲಿ ಕುಳಿತರೆ ಕೆಲಸಗಳಾಗುವುದಿಲ್ಲ. ತಾಲೂಕು ಕಚೇರಿಗಳಿಗೆ ಭೇಟಿ ನೀಡಬೇಕು, ಸ್ಥಳ ಪರಿಶೀಲನೆ ಮಾಡಬೇಕು. ಇದರಿಂದ ಆಡಳಿತ ಚುರುಕಾಗಿ‌ ಜನರಿಗೆ ಸಕಾಲಕ್ಕೆ ನೆರವು ಸಿಗುತ್ತದೆ, ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಯಲು ಆಂದೋಲನ ಮಾದರಿಯಲ್ಲಿ ಲಸಿಕೆ ವಿತರಿಸಲು ತಿಳಿಸಲಾಗಿತ್ತು. ಲಸಿಕೆ ವಿತರಣೆಯೂ ಸಮರ್ಪಕವಾಗಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.