ರೈಲಿನಲ್ಲಿ ಪ್ರಯಾಣಿಕರಿಗೆ ತೊಂದರೆ ನೀಡಿದರೆ ಕ್ರಮ

ನವದೆಹಲಿ :ಭಾರತೀಯ ರೈಲ್ವೆ ಸಚಿವಾಲಯ ರೈಲಿನಲ್ಲಿ ಪ್ರಯಾಣಿಸುವ ನಿಯಮಗಳಲ್ಲಿ ಕಾಲಕಾಲಕ್ಕೆ ಬದಲಾವಣೆಗೆ ಮುಂದಾಗಿದ್ದು, ಇದೀಗ ರಾತ್ರಿ ವೇಳೆ ಪ್ರಯಾಣಿಕರ ನಿದ್ದೆಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಕ್ರಮ ಕೈಗೊಂಡಿದೆ.
ಹೊಸ ಕ್ರಮಗಳ ಪ್ರಕಾರ, ಈಗ ನಿಮ್ಮ ಸುತ್ತಮುತ್ತಲಿನ ಯಾವುದೇ ರೈಲು ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುವಂತಿಲ್ಲ ಮತ್ತು ಜೋರಾದ ಧ್ವನಿಯಲ್ಲಿ ಅವರು ಹಾಡುಗಳನ್ನು ಕೇಳುವಂತಿಲ್ಲ.ಈ ಬಗ್ಗೆ ಇತರೆ ಪ್ರಯಾಣಿಕರಿಂದ ದೂರುಗಳು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ.
ರೈಲಿನಲ್ಲಿ ಪ್ರಯಾಣಿಕರಿಂದ ಸ್ವೀಕರಿಸಿದ ದೂರನ್ನು ಪರಿಹರಿಸದಿದ್ದರೆ, ರೈಲು ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ನಿಯಮಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ವಲಯಗಳಿಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.
ಆಗಾಗ್ಗೆ ಪ್ರಯಾಣಿಕರು ಪಕ್ಕದ ಸೀಟಿನಲ್ಲಿರುವ ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುವುದು ಅಥವಾ ಸಂಗೀತವನ್ನು ಕೇಳುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದವು.
ಸಿಬ್ಬಂದಿ ಗಸ್ತಿಗೆ ಬರುವ ಸಮಯದಲ್ಲಿ ಜೋರಾಗಿ ಮಾತನಾಡುವಾಗ ಇಂತಹ ಪ್ರಕರಣಗಳು ಗಮನಕ್ಕೆ ಬಂದಿವೆ. ಇದರಿಂದ ಪ್ರಯಾಣಿಕರ ನಿದ್ದೆಗೆ ಭಂಗ ಉಂಟಾಗುತ್ತಿದೆ.