ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಬಿಸಿಸಿಐ ಆಯ್ಕೆ ಸಮಿತಿಯ ಚೇತನ್ ಶರ್ಮಾ
ಮುಂಬೈ: ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಅವರು, ಖಾಸಗಿ ಸುದ್ದಿವಾಹಿನಿಯ ಸ್ಟಿಂಗ್ ಆಪರೇಶನ್ನಲ್ಲಿ ಸಿಕ್ಕಿಬಿದ್ದಿದ್ದಾರೆ. ಆಟಗಾರರ ಆಯ್ಕೆಯ ಕೆಲವು ಮಾಹಿತಿಗಳನ್ನು ಅವರು ಬಿಚ್ಚಿಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.
ಟಿ-20 ವಿಶ್ವಕಪ್ನಲ್ಲಿ ತಂಡದ ಕಳಪೆ ಪ್ರದರ್ಶನದ ಬಳಿಕ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡಿ ಬಳಿಕ ಮತ್ತೆ ಅಧಿಕಾರ ನೀಡಲಾಗಿತ್ತು. ಕುಟುಕು ಕಾರ್ಯಾಚರಣೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬೂಮ್ರಾ ಅವರಂತಹ ಆಟಗಾರರ ಮೇಲೆ ಆಪಾದನೆಗಳನ್ನು ಮಾಡಿದ್ದಾರೆ. ಅಲ್ಲದೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗಿನ ಆಂತರಿಕ ಚರ್ಚೆಗಳನ್ನು ಅವರು ಬಹಿರಂಗಪಡಿಸಿದ್ದಾರೆ.
ಕೆಲವು ಆಟಗಾರರು ಶೇಕಡ 80ರಿಂದ 85ರಷ್ಟು ಫಿಟ್ ಆಗಿದ್ದರೂ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಶರ್ಮಾ ಆರೋಪಿಸಿದ್ದಾರೆ.
ಗಾಯದಿಂದ ಚೇತರಿಸಿಕೊಂಡು ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಗೆ ಬೂಮ್ರಾ ಹಿಂದಿರುಗಿದ ಬಗ್ಗೆ ಅವರ ಮತ್ತು ತಂಡದ ಮ್ಯಾನೇಜ್ಮೆಂಟ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪಿಟಿಐ ಸಂಪರ್ಕಿಸಿದಾಗ ಶರ್ಮಾ ಪ್ರತಿಕ್ರಿಯೆಗೆ ಸಿಗಲಿಲ್ಲ ರಾಷ್ಟ್ರೀಯ ಆಯ್ಕೆದಾರರು ಒಪ್ಪಂದಕ್ಕೆ ಬದ್ಧರಾಗಿರುವುದರಿಂದ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂಬ ನಿಯಮವಿದೆ. ಹೀಗಾಗಿ, ಬಿಸಿಸಿಐ ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.