ಪ್ರತಿಮೆ ಆಯ್ತು ಈಗ ವಿವಾದದ ಅನಾವರಣ

ಪ್ರತಿಮೆ ಆಯ್ತು ಈಗ ವಿವಾದದ ಅನಾವರಣ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸದಿರುವುದು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಮಧ್ಯೆ ವಾಕ್ಸಮರ ಸೃಷ್ಟಿಸಿದ್ದು, ಕಂದಾಯ ಸಚಿವ ಆರ್.ಅಶೋಕ್ ಅವರು ಆದಿಚುಂಚನಗಿರಿ ಪೀಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಹೆಗಲ ಮೇಲೆ ಕೈ ಹಾಕಿರುವುದು ಇದೀಗ ಹೊಸ ವಿವಾದ ಸೃಷ್ಟಿಸಿದೆ.

ದೇವೇಗೌಡರಿಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಹ್ವಾನ ಕೊಟ್ಟಿದ್ದಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದ್ದು,‌ಮುಖ್ಯಮಂತ್ರಿ ಹೆಸರಿನಲ್ಲಿ ಬರೆದ ಪತ್ರ ಜಾಲತಾಣಗಳಲ್ಲಿ ಓಡಾಡುತ್ತಿದೆ.

ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯ ಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಬಿಜೆಪಿ ಕಿಡಿಕಾರಿದೆ. ಮಾಜಿ ಪ್ರಧಾನಿಗೆ ಒಂದು ದಿನ ಮೊದಲು ಆಹ್ವಾನ ಕೊಟ್ಟಿರುವುದು ಜೊತೆಗೆ ಭಾಗವಹಿಸಿ ಎನ್ನುವುದರ ಅರ್ಥವೇನು? ನಿಮ್ಮ ಜಾಹೀರಾತುಗಳಲ್ಲಿ ಅವರ ಹೆಸರನ್ನು ಉಲ್ಲೇಖ ಮಾಡಲಾಗಿದೆಯೇ? ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಜೆಡಿಎಸ್ ತಿರುಗೇಟು ನೀಡಿದೆ.ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಭಾರತೀಯ ಜನತಾ ಪಕ್ಷಕ್ಕೆ ಸಿದ್ಧಿಸಿರುವ ಕಲೆ ಎಂದು ಲೇವಡಿ ಮಾಡಿದೆ.

ನವೆಂಬರ್ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು ಯಾವಾಗ? ಆ ಪತ್ರವನ್ನು ಮಾಜಿ ಪ್ರಧಾನಿಯವರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ ಹೇಗೆ? ಘನತೆವೆತ್ತ ಮುಖ್ಯಮಂತ್ರಿಗಳು ಬರೆದ ಘನವೆತ್ತ ಪತ್ರವನ್ನೊಮ್ಮೆ ಸಂಘ ಸಂಸ್ಕಾರದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ? (ಕೊನೆಯಲ್ಲಿ) ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ? ಎಂದು ಕಿಡಿಕಾರಿದೆ.

ಅಪಮಾನ ಮಾಡಿಲ್ಲ:

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅಪಮಾನ ಮಾಡುವಂತಹ ಕೆಲಸವನ್ನು ಸರ್ಕಾರವಾಗಲಿ, ನಮ್ಮ ಪಕ್ಷವಾಗಲಿ ಮಾಡಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ, ಪತ್ರ ಬರೆದು, ದೂರವಾಣಿ ಕರೆ ಮೂಲಕ ಕಾರ್ಯಕ್ರಮಕ್ಕೆ ಬರಬೇಕೆಂದು ಮನವಿ ಮಾಡಿದ್ದರು. ದೇವೇಗೌಡರಿಗೆ ಎಲ್ಲೂ ಕೂಡ ಅವಮಾನ ಆಗುವ ರೀತಿ ನಡೆದುಕೊಂಡಿಲ್ಲ. ಪ್ರತಿಮೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅದೇ ರೀತಿ ಉದ್ಘಾಟನಾ ಕಾರ್ಯಕ್ರಮಕ್ಕೂ ಆಹ್ವಾನಿಸಲಾಗಿದೆ. ಇಡೀ ಕಾರ್ಯಕ್ರಮದ ಬಗ್ಗೆ ನಿರ್ಮಲಾನಂದನಾಥ ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲವರು ರಾಜಕೀಯಕ್ಕೋಸ್ಕರ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ ಸಮರ್ಥಿಸಿಕೊಂಡಿದ್ದಾರೆ.

ಅಶೋಕ್ ವಿವಾದ:

ಕಾರ್ಯಕ್ರಮ ಮುಗಿದ ಬಳಿಕ ಕೆಂಪೇಗೌಡರ ಪ್ರತಿಮೆ ಬಳಿ ಕಂದಾಯ ಸಚಿವ ಆರ್.ಅಶೋಕ್ ಫೋಟೋ ತೆಗೆಯುವ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಗಳ ಹಗೆಲ ಮೇಲೆ ಕೈ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.

ಇದಕ್ಕೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶ್ರೀಗಳ ಬಗ್ಗೆ ಸಂಸ್ಕಾರವಿಲ್ಲದವರಿಂದ ಇನ್ನೇನು ನಿರೀಕ್ಷೆ ಮಾಡುವುದು. ಎಲ್ಲವನ್ನು ಹಣದಿಂದಲೇ ಅಳೆಯುವವರಿಗೆ ಧರ್ಮ ಗುರುಗಳ ಬಗ್ಗೆ ಗೊತ್ತಿಲ್ಲದಿರುವುದು ದುರದೃಷ್ಟಕರ ಎಂದು ಪರೋಕ್ಷವಾಗಿ ಅಶೋಕ್ ವಿರುದ್ಧ ಅಸಮಾಧಾನ ಹೊರಹಾಕಿದರು.