ಇಂದಿನಿಂದ ಆಸೀಸ್‌ಗೆ ದಿಲ್ಲಿಯಲ್ಲಿ "ಟೆಸ್ಟ್‌" ; ತಿರುಗಿ ಬೀಳುವುದೇ ಪ್ಯಾಟ್‌ ಕಮಿನ್ಸ್‌ ಪಡೆ?

ಇಂದಿನಿಂದ ಆಸೀಸ್‌ಗೆ ದಿಲ್ಲಿಯಲ್ಲಿ "ಟೆಸ್ಟ್‌" ; ತಿರುಗಿ ಬೀಳುವುದೇ ಪ್ಯಾಟ್‌ ಕಮಿನ್ಸ್‌ ಪಡೆ?

ವದೆಹಲಿ: ನಾಗ್ಪುರ ಟೆಸ್ಟ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಸಂಭ್ರಮದಲ್ಲಿರುವ ಭಾರತೀಯ ತಂಡವು ಶುಕ್ರವಾರದಿಂದ ನವದೆಹಲಿಯಲ್ಲಿ ನಡೆಯುವ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಮತ್ತೆ ಆಸ್ಟ್ರೇಲಿಯ ವಿರುದ್ಧ ಬೃಹತ್‌ ಗೆಲುವು ದಾಖಲಿಸುವ ಉತ್ಸಾಹದಲ್ಲಿದೆ.

ಕೆ.ಎಲ್‌.ರಾಹುಲ್‌ ಸಹಿತ ಅಗ್ರಕ್ರಮಾಂಕದ ಆಟಗಾರರ ಬ್ಯಾಟಿಂಗ್‌ ವೈಫ‌ಲ್ಯದ ಚಿಂತೆ ಭಾರತಕ್ಕೆ ಇಲ್ಲಿಯೂ ಕಾಡುತ್ತಿದೆ. ಈ ಪಂದ್ಯ ಚೇತೇಶ್ವರ ಪೂಜಾರ ಅವರ ಪಾಲಿಗೆ 100ನೇ ಟೆಸ್ಟ್‌ ಆಗಿದೆ. 13 ವರ್ಷಗಳ ದೀರ್ಘ‌ ಟೆಸ್ಟ್‌ ಪಯಣದ ದಾರಿಯಲ್ಲಿ ಮಹತ್ತರ ಸಾಧನೆಯೊಂದನ್ನು ದಾಖಲಿಸುತ್ತಿರುವ ಪೂಜಾರ ಇಲ್ಲಿ 20ನೇ ಟೆಸ್ಟ್‌ ಶತಕ ಸಾಧಿಸುವ ಆತ್ಮವಿಶ್ವಾಸದಲ್ಲಿದ್ದಾರೆ.

ನಾಗ್ಪುರದ ನಿಧಾನಗತಿಯ ಪಿಚ್‌ನಲ್ಲಿಯೂ ತಾಳ್ಮೆಯ ಆಟವಾಡಿ ಶತಕ ದಾಖಲಿಸಿದ ನಾಯಕ ರೋಹಿತ್‌ ಶರ್ಮ ತಂಡವನ್ನು ಆಧರಿಸುವ ಸಾಧ್ಯತೆಯಿದೆ. ರಾಹುಲ್‌, ಕೊಹ್ಲಿ ಮತ್ತು ಪೂಜಾರ ಅವರ ಫಾರ್ಮ್ ಬಗ್ಗೆ ತಂಡಕ್ಕೆ ಸ್ವಲ್ಪಮಟ್ಟಿನ ಚಿಂತೆಯಿದೆ. ಪೂಜಾರ ಅವರಿಗಿದು ತನ್ನ ಬಾಳ್ವೆಯ ಮಹತ್ವದ ಪಂದ್ಯವಾದ ಕಾರಣ ಎಚ್ಚರಿಕೆಯಿಂದ ಆಡುವ ನಿರೀಕ್ಷೆಯಿದೆ. ಉತ್ತಮ ಫಾರ್ಮ್ನಲ್ಲಿದ್ದರೂ ಶುಭ್‌ಮನ್‌ ಗಿಲ್‌ ಅವರನ್ನು ಆಟವಾಡುವ ಬಳಗಕ್ಕೆ ಸೇರಿಸಿಕೊಳ್ಳುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

ನಾಗ್ಪುರದಲ್ಲಿ ಅಮೋಘ ಬೌಲಿಂಗ್‌ ನಿರ್ವಹಣೆ ನೀಡಿದ ರವೀಂದ್ರ ಜಡೇಜ ಮತ್ತು ಆರ್‌.ಅಶ್ವಿ‌ನ್‌ ಇಲ್ಲಿಯೂ ಸ್ಪಿನ್‌ ಮೋಡಿ ಮಾಡುವ ನಿರೀಕ್ಷೆಯಿದೆ. ನಾಗ್ಪುರದಂತೆ ಇಲ್ಲಿನ ಪಿಚ್‌ ನಿಧಾನಗತಿಯಿಂದ ಕೂಡಿರುವ ಕಾರಣ ಸ್ಪಿನ್‌ ಬೌಲರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಜಡೇಜ ಸಹಿತ ಸದ್ಯ ಗಾಯಗೊಂಡಿರುವ ರಿಷಭ್‌ ಪಂತ್‌ ಮತ್ತು ಶ್ರೇಯಸ್‌ ಐಯ್ಯರ್‌ ಅವರ ಕೊಡುಗೆಯನ್ನು ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಸ್ಮರಿಸಿಕೊಂಡಿದ್ದಾರೆ. ನಾಗ್ಪುರ ಟೆಸ್ಟ್‌ನಲ್ಲೂ ಜಡೇಜ ಮತ್ತು ಅಕ್ಷರ್‌ ಪಟೇಲ್‌ ಆಸ್ಟ್ರೇಲಿಯದ ಕುಸಿತಕ್ಕೆ ಪ್ರಮುಖ ಕಾರಣರಾಗಿದ್ದರು ಎಂದು ದ್ರಾವಿಡ್‌ ಹೇಳಿದ್ದಾರೆ.

ಐಯ್ಯರ್‌ ಅಥವಾ ಸೂರ್ಯ
ಬೆನ್ನಿನ ಕೆಳಭಾಗದಲ್ಲಿನ ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡಿರುವ ಶ್ರೇಯಸ್‌ ಐಯ್ಯರ್‌ ಅವರನ್ನು ಈ ಪಂದ್ಯಕ್ಕಾಗಿ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಐದು ದಿನಗಳ ಆಟದ ಸಾಮರ್ಥ್ಯವನ್ನು ನಿಭಾಯಿಸಲು ಅವರಿಂದ ಸಾಧ್ಯವಾದರೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಇಲ್ಲದಿದ್ದರೆ ಸೂರ್ಯಕುಮಾರ್‌ ಯಾದವ್‌ ಅವರಿಗೆ ಇನ್ನೊಂದು ಅವಕಾಶ ಸಿಗುವ ನಿರೀಕ್ಷೆಯಿದೆ ಎಂದು ದ್ರಾವಿಡ್‌ ಹೇಳಿದ್ದಾರೆ.

ವಾರ್ನರ್‌ಗೆ ಅವಕಾಶ
ಡೇವಿಡ್‌ ವಾರ್ನರ್‌ ಅವರ ಕಳಫೆ ಫಾರ್ಮ್ ತಂಡಕ್ಕೆ ಚಿಂತೆಯಾಗಿದ್ದರೂ ಅವರಿಗೆ ಇನ್ನೊಂದು ಅವಕಾಶ ನೀಡುವ ಸಾಧ್ಯತೆಯಿದೆ. ಇದೇ ವೇಳೆ ತಂಡವು ಹೆಚ್ಚುವರಿ ಸ್ಪಿನ್ನರ್‌ ಆಗಿ ಮ್ಯಾಟ್‌ ಕುಹ್ನೆಮನ್‌ ಅವರನ್ನು ಸೇರಿಸಿಕೊಂಡಿದೆ. ಹೀಗಾಗಿ ಪ್ರವಾಸಿ ತಂಡ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಮಿಚೆಲ್‌ ಸ್ಟಾರ್ಕ್‌ ಫಿಟ್‌ ಆಗಿದ್ದರೆ ಅವರು ಸ್ಕಾಟ್‌ ಬೋಲ್ಯಾಂಡ್‌ ಬದಲಿಗೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ಉಭಯ ತಂಡಗಳು

ಭಾರತ
ರೋಹಿತ್‌ ಶರ್ಮ (ನಾಯಕ), ಕೆಎಲ್‌ ರಾಹುಲ್‌, ಚೇತೇಶ್ವರ ಪೂಜಾರ, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌, ರವೀಂದ್ರ ಜಡೇಜ, ಕೆ.ಎಸ್‌.ಭರತ್‌, ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಕುಲದೀಪ್‌ ಯಾದವ್‌, ಇಶಾನ್‌ ಕಿಶನ್‌.

ಆಸ್ಟ್ರೇಲಿಯ
ಪ್ಯಾಟ್‌ ಕಮಿನ್ಸ್‌ (ನಾಯಕ), ಡೇವಿಡ್‌ ವಾರ್ನರ್‌, ಉಸ್ಮಾನ್‌ ಖವಾಜ, ಮಾರ್ನಸ್‌ ಲಬುಶೇನ್‌, ಸ್ಟೀವನ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಅಲೆಕ್ಸ್‌ ಕ್ಯಾರೆ, ಮ್ಯಾಟ್‌ ರೆನ್‌ಶಾ, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ನಥನ್‌ ಲಿಯೋನ್‌, ಆಸ್ಟನ್‌ ಅಗರ್‌, ಸ್ಕಾಟ್‌ ಬೋಲ್ಯಾಂಡ್‌, ಲ್ಯಾನ್ಸ್‌ ಮೊರಿಸ್‌, ಮಿಚೆಲ್‌ ಸ್ವೀಪ್ಸನ್‌, ಟಾಡ್‌ ಮರ್ಫಿ, ಮಿಚೆಲ್‌ ಸ್ಟಾರ್ಕ್‌.

2013ರ ಟೆಸ್ಟ್‌ನಲ್ಲೂ ಗೆಲುವು

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯ ಈ ಹಿಂದೆ 2013ರಲ್ಲಿ ನವದೆಹಲಿಯಲ್ಲಿ ಟೆಸ್ಟ್‌ ಪಂದ್ಯವನ್ನು ಆಡಿತ್ತು. ಧೋನಿ ನೇತೃತ್ವದ ಭಾರತೀಯ ತಂಡವು ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಜಯಿಸಿತ್ತು. ಆರ್‌.ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅಮೋಘ ನಿರ್ವಹಣೆ ನೀಡಿದ್ದು 14 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದರು. ಇಲ್ಲಿನ ಪಿಚ್‌ ಕಡಿಮೆ ಬೌನ್ಸ್‌ ಆಗುವ ಕಾರಣ ಜಡೇಜ ಮತ್ತು ಅಶ್ವಿ‌ನ್‌ ಇಲ್ಲಿ ಈ ಬಾರಿಯೂ ಮಿಂಚುವ ಸಾಧ್ಯತೆಯಿದೆ. ಇದೇ ಪಿಚ್‌ನಲ್ಲಿ ಖ್ಯಾತ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು.

ಪಂದ್ಯ ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್