ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡ ಪ್ರಕಟ; ಭಾರತದ ಮೂವರು ಕ್ರಿಕೆಟಿಗರಿಗೆ ತಂಡದಲ್ಲಿ ಸ್ಥಾನ

ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡ ಪ್ರಕಟ; ಭಾರತದ ಮೂವರು ಕ್ರಿಕೆಟಿಗರಿಗೆ ತಂಡದಲ್ಲಿ ಸ್ಥಾನ
ಐಸಿಸಿ ವರ್ಷದ ಟಿ20 ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಿಸಿರುವ ಐಸಿಸಿ, ತನ್ನ ತಂಡದಲ್ಲಿ ಮೂವರು ಭಾರತೀಯ ಆಟಗಾರರಿಗೆ ಸ್ಥಾನ ನೀಡಿದೆ.

ಐಸಿಸಿ ವರ್ಷದ ಟಿ20 ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ತಂಡದ ನಾಯಕತ್ವವನ್ನು ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್‌ಗೆ ವಹಿಸಲಾಗಿದೆ. ಕಳೆದ ವರ್ಷ, ಅಂದರೆ 2022ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ, ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್​ರೌಂಡರ್ ಕೋಟಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಐಸಿಸಿ ತನ್ನ ವಾರ್ಷಿಕ ತಂಡದಲ್ಲಿ ಆಯ್ಕೆ ಮಾಡಿದೆ.

ಯಾವ ದೇಶದಿಂದ ಎಷ್ಟು ಆಟಗಾರರಿಗೆ ಸ್ಥಾನ?

ಇನ್ನು ಐಸಿಸಿ ಆಯ್ಕೆ ಮಾಡಿರುವ ತಂಡದಲ್ಲಿ ಯಾವ ದೇಶದ ಎಷ್ಟು ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನು ಗಮನಿಸುವುದಾದರೆ, ಇಂಗ್ಲೆಂಡ್ ತಂಡದಿಂದ ಐಸಿಸಿ ತಂಡದ ನಾಯಕತ್ವ ವಹಿಸಿರುವ ಜೋಸ್ ಬಟ್ಲರ್ ಸೇರಿದಂತೆ, ವಿಶ್ವಕಪ್​ನಲ್ಲಿ ಮ್ಯಾನ್​ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಸ್ಯಾಮ್ ಕರನ್ ಕೂಡ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ತಂಡದಿಂದ ಮೊಹಮ್ಮದ್ ರಿಜ್ವಾನ್ ಹಾಗೂ ಹ್ಯಾರಿಸ್ ರೌಫ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಟೀಂ ಇಂಡಿಯಾದಿಂದ ಮೂವರು ಆಟಗಾರರು ಆಯ್ಕೆಯಾಗಿದ್ದು, ಒಂದು ದೇಶದಿಂದ ಆಯ್ಕೆಯಾದ ಗರಿಷ್ಠ ಆಟಗಾರರ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನ ಪಡೆದುಕೊಂಡಿದೆ.

ನ್ಯೂಜಿಲೆಂಡ್ ತಂಡದಿಂದ ಗ್ಲೆನ್ ಫಿಲಿಪ್ಸ್ ರೂಪದಲ್ಲಿ ಒಬ್ಬ ಆಟಗಾರ ಆಯ್ಕೆಯಾಗಿದ್ದರೆ, ಜಿಂಬಾಬ್ವೆ ತಂಡದಿಂದ ಸಿಕಂದರ್ ರಜಾ ಆಯ್ಕೆಯಾಗಿದ್ದಾರೆ. ಹಾಗೆಯೇ ಶ್ರೀಲಂಕಾ ತಂಡದಿಂದ ವನಿಂದು ಹಸರಂಗಾ ಐಸಿಸಿ ತಂಡದಲ್ಲಿ ಸ್ಥಾನ ಪಡೆದ ಏಕೈಕ ಲಂಕಾ ಆಟಗಾರನಾಗಿದ್ದು, ಕ್ರಿಕೆಟ್ ಶಿಶು ಐರ್ಲೆಂಡ್ ತಂಡದಿಂದ ಜೋಶ್ ಲಿಟಲ್ ಐಸಿಸಿ ವಾರ್ಷಿಕ ತಂಡಕ್ಕೆ ಆಯ್ಕೆಯಾಗಿದ್ದಾರೆ.