ದಕ್ಷಿಣ ಕ್ಯಾಲಿಫೋರ್ನಿಯಾ ಪರ್ವತ ಶ್ರೇಣಿಗಳಲ್ಲಿ ನಾಪತ್ತೆಯಾದ ಖ್ಯಾತ ಹಾಲಿವುಡ್ ನಟ ಜೂಲಿಯನ್ ಸ್ಯಾಂಡ್

ಜೂಲಿಯನ್ ಸ್ಯಾಂಡ್ (Photo credit: Twitter/@ians_india)
ಕ್ಯಾಲಿಫೋರ್ನಿಯಾ: "A Room With a View' ಚಿತ್ರ ಸೇರಿದಂತೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತ ಹಾಲಿವುಡ್ ನಟ ಜೂಲಿಯನ್ ಸ್ಯಾಂಡ್ (Julian Sands), ಐದು ದಿನಗಳಿಂದ ದಕ್ಷಿಣ ಕ್ಯಾಲಿಫೋರ್ನಿಯಾ ಪರ್ವತ ಶ್ರೇಣಿಗಳಲ್ಲಿ ನಾಪತ್ತೆಯಾಗಿದ್ದಾರೆ ಎಂದು ಪ್ರಾಧಿಕಾರಗಳು ತಿಳಿಸಿವೆ.
ಸ್ಯಾನ್ ಗೇಬ್ರಿಯಲ್ ಪರ್ವತ ಪ್ರದೇಶದಲ್ಲಿ ಜೂಲಿಯನ್ ಸ್ಯಾಂಡ್ ಪತ್ತೆಗಾಗಿ ಶೋಧನಾ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದರೂ, ವಿಷಮ ಪರ್ವತಾರೋಹಣ ಪರಿಸ್ಥಿತಿ ಹಾಗೂ ಹಿಮರಾಶಿಯ ಅಪಾಯದ ಕಾರಣಕ್ಕಾಗಿ ಶೋಧವನ್ನು ಶನಿವಾರದಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೂಮಾರ್ಗದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದರೂ, ಹೆಲಿಕಾಪ್ಟರ್ ಹಾಗೂ ಡ್ರೋನ್ ಮೂಲಕ ನಡೆಸಲಾಗುತ್ತಿರುವ ಶೋಧ ಕಾರ್ಯವು ಮುಂದುವರಿದಿದೆ ಎಂದು ಪ್ರಾಧಿಕಾರಗಳು ಸ್ಪಷ್ಟಪಡಿಸಿವೆ.
ಈ ಕುರಿತು ವರದಿ ಮಾಡಿರುವ Associated Press, ದಕ್ಷಿಣ ಕ್ಯಾಲಿಫೋರ್ನಿಯಾ ಮೇಲೆ ತೀವ್ರ ಸ್ವರೂಪದ ಚಂಡಮಾರುತಗಳು ಅಪ್ಪಳಿಸಿರುವುದರಿಂದ ಇತ್ತೀಚೆಗೆ ಇಬ್ಬರು ಪರ್ವತಾರೋಹಿಗಳು ಮೃತಪಟ್ಟಿದ್ದರು ಎಂದು ಹೇಳಿದೆ.
1985ರಲ್ಲಿ ಬಿಡುಗಡೆಯಾಗಿದ್ದ, ನಟಿ ಹೆಲೆನಾ ಬೊನ್ಹಾಮ್‌ರೊಂದಿಗೆ ಕಾಣಿಸಿಕೊಂಡಿದ್ದ, ಜೇಮ್ಸ್ ಐವರಿ ನಿರ್ದೇಶನದ 'A Room With a View' ಚಿತ್ರದಲ್ಲಿನ ಪಾತ್ರ ನಿರ್ವಹಣೆಗಾಗಿ ಮತ್ತು 1989ರ 'Warlock', 1990ರ 'Arachnophobia', 1991ರ 'Naked Lunch', 1993ರ 'Boxing Helena' ಮತ್ತು 1995ರ 'Leaving Las Vegas' ಚಿತ್ರಗಳಲ್ಲಿ ನಿರ್ವಹಿಸಿದ್ದ ಮುಖ್ಯ ಪಾತ್ರಗಳಿಗಾಗಿ ಜೂಲಿಯನ್ ಸ್ಯಾಂಡ್ ಅಪಾರ ಪ್ರಶಂಸೆಗೊಳಗಾಗಿದ್ದರು. ಅವರು ಕಿರುತೆರೆ ಹಾಗೂ ನಾಟಕ ಸರಣಿಗಳಲ್ಲೂ ಕಿರು ಪಾತ್ರಗಳಲ್ಲಿ ನಟಿಸಿದ್ದಾರೆ.
1990ರಲ್ಲಿ ಲೇಖಕಿ ಎವೆಗ್ನಿಯ ಸಿಟ್ಕೊವಿಝ್ ಅವರನ್ನು ಜೂಲಿಯನ್ ಸ್ಯಾಂಡ್ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಲ್ಲದೆ ಈ ಹಿಂದಿನ ಪತ್ನಿಯಿಂದಲೂ ಜೂಲಿಯನ್ ಸ್ಯಾಂಡ್ ಒಂದು ಮಗು ಪಡೆದಿದ್ದಾರೆ.