ವಿದ್ಯಾರ್ಥಿಯ ಅಸಭ್ಯ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ ಅಪರ್ಣಾ ಬಾಲಮುರಳಿ

ವಿದ್ಯಾರ್ಥಿಯ ಅಸಭ್ಯ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ ಅಪರ್ಣಾ ಬಾಲಮುರಳಿ

ಕೊಚ್ಚಿ: ನಟ ಸೂರ್ಯ ಅಭಿನಯದ 'ಸೂರರೈ ಪೋಟ್ರು' ಸಿನಿಮಾದಲ್ಲಿ ನಾಯಕಿಯಾಗಿ ಅಮೋಘ ಅಭಿನಯ ಮಾಡಿ ಜನಮನ್ನಣೆ ಗಳಿಸಿದ ನಟಿ ಅಪರ್ಣಾ ಬಾಲಮುರಳಿ ಎರ್ನಾಕುಲಂನ ಕೆಲ ಕಾನೂನು ವಿದ್ಯಾರ್ಥಿಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

ಜನವರಿ 26 ರಂದು ಬಿಡುಗಡೆಯಾಗಲಿರುವ 'ತಂಗಂ' ಚಿತ್ರದ ಪ್ರಚಾರಕ್ಕೆಂದು ಅಪರ್ಣಾ ಕಾಲೇಜಿಗೆ ಭೇಟಿ ನೀಡಿದ್ದರು.

ಈ ವೇಳೆ ವಿದ್ಯಾರ್ಥಿಯೊಬ್ಬ ಸೆಲ್ಫಿಗಾಗಿ ಅಪರ್ಣಾ ಬಳಿ ಮನವಿ ಮಾಡಿದ್ದ. ಅಪರ್ಣಾ ಎದ್ದು ನಿಂತಾಗ ಆ ವಿದ್ಯಾರ್ಥಿ ಅಪರ್ಣಾ ಅವರ ಮೇಲೆ ಕೈ ಹಾಕಲು ಯತ್ನಿಸಿದಾಗ, ಮುಜುಗರ ಅನುಭವಿಸಿದ್ದಾಗಿ ಅಪರ್ಣಾ ಹೇಳಿಕೊಂಡಿದ್ದಾರೆ.

ಮಹಿಳೆಯ ಅನುಮತಿಯಿಲ್ಲದೆ ಆಕೆಯ ದೇಹವನ್ನು ಸ್ಪರ್ಶಿಸುವುದು ತಪ್ಪು ಎಂದು ಕಾನೂನು ಕಾಲೇಜು ವಿದ್ಯಾರ್ಥಿಗೆ ಅರ್ಥವಾಗದಿರುವುದು ತುಂಬಾ ಗಂಭೀರವಾಗಿದೆ ಎಂದು ನಟಿ ಅಪರ್ಣಾ ಬೇಸರ ಹೊರಹಾಕಿದ್ದಾರೆ.

ನನ್ನ ಕೈ ಹಿಡಿದು ನಿಲ್ಲುವಂತೆ ಮಾಡಿದ್ದು ಕೂಡ ಸರಿಯಲ್ಲ. ನಂತರ ಅವರು ಸೆಲ್ಫಿಗಾಗಿ ತನ್ನ ಸುತ್ತಲೂ ಕೈ ಹಾಕಿದ್ದೂ ತರವಲ್ಲ. ಮಹಿಳೆ ಜೊತೆ ಈ ರೀತಿ ನಡೆದುಕೊಳ್ಳಬಾರದು. ಈ ಸಂಬಂಧ ನಾನು ದೂರು ದಾಖಲಿಸಲು ಬಯಸಿಲ್ಲ. ಅದಕ್ಕೆ ಸಮಯವೂ ಇಲ್ಲ. ನನ್ನ ಆಕ್ಷೇಪವೇ ಅದಕ್ಕೆ ಉತ್ತರ. ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಅಪರ್ಣಾ ಹೇಳಿದರು.

ಇದೇ ಸಂದರ್ಭದಲ್ಲಿ ಕಾನೂನು ಕಾಲೇಜು ಯೂನಿಯನ್ ಕೂಡ ಕೆಟ್ಟ ನಡವಳಿಕೆಗೆ ವಿಷಾದ ವ್ಯಕ್ತಪಡಿಸಿದೆ.