'ದ್ವೇಷ ಅಳಿಸಿ-ಸಂವಿಧಾನ ಉಳಿಸಿ ಅಭಿಯಾನ': ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಕರೆ

'ದ್ವೇಷ ಅಳಿಸಿ-ಸಂವಿಧಾನ ಉಳಿಸಿ ಅಭಿಯಾನ': ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಕರೆ

ಬೆಂಗಳೂರು: ಸಮಾಜದಲ್ಲಿ ಸೌಹಾರ್ದತೆ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ 'ದ್ವೇಷ ಅಳಿಸಿ-ಸಂವಿಧಾನ ಉಳಿಸಿ'ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ನರ್ಮದಾ ಬಚಾವೊ ಅಂದೋಲನದ ಸಂಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ತಿಳಿಸಿದ್ದಾರೆ.

ನಗರದ ಬೆನ್ಸನ್‍ಟೌನ್‍ನಲ್ಲಿರುವ ಇಂಡಿಯನ್ ಸೋಶಿಯಲ್ ಇನ್ಸಿಟ್ಯೂಟ್ ಸಭಾಂಗಣದಲ್ಲಿ ಪೀಪಲ್ಸ್ ಫಸ್ಟ್, ನ್ಯಾಶನಲ್ ಅಲೈಯನ್ಸ್ ಫಾರ್ ಪೀಪಲ್ಸ್ ಮೂವ್‍ಮೆಂಟ್ಸ್ ಸೆರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ, ಚುನಾವಣಾ ಮತ್ತು ಪ್ರಜಾಪ್ರಭುತ್ವ ಕುರಿತ ವಿಚಾರ ಸಂಕಿರಣವನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರೀತಿಯ ಮಳೆ ಸುರಿಯಬೇಕಿದ್ದ ಸ್ಥಳದಲ್ಲಿ ಗುಂಡಿನ ಮಳೆ ಸುರಿಸಲಾಗಿದೆ. ವೋಟ್‍ಬ್ಯಾಂಕ್ ರಾಜಕಾರಣಕ್ಕೆ ಹಲವರು ಬಲಿಯಾಗಿದ್ದಾರೆ. ದ್ವೇಷ ಅಳಿಸಿ, ದೇಶ ಉಳಿಸುವ ತುರ್ತು ಎದುರಾಗಿದೆ. ಹಾಗಾಗಿ, ದೇಶದ ಎಲ್ಲೆಡೆ ವಿಶೇಷ ಅಭಿಯಾನಕ್ಕೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲಿಯೂ ಇದು ಜರುಗಲಿದೆ ಎಂದರು.

ದೇಶದಲ್ಲಿ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ದೇಶ ಗಲಭೆಯಗೂಡಾಗಿ ಪರಿವರ್ತನೆ ಹೊಂದುತ್ತಿದೆ. ಕೋಮುಭಾವನೆ ಕದಡುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಭಾರತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಆರ್ಥಿಕ ಕುಸಿತ, ನಿರುದ್ಯೋಗದ ಸಮಸ್ಯೆಕಾಡುತ್ತಿದೆ. ರೈತರಆತ್ಮಹತ್ಯೆ, ಅತ್ಯಾಚಾರ ಹಾಗೂ ಆದಿವಾಸಿ, ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಸರಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್, ವಿಮಾನ ನಿಲ್ದಾಣ, ಬ್ಯಾಂಕುಗಳನ್ನು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿದೆಇನ್ನುಳಿದ ಸಂಸ್ಥೆಗಳನ್ನು ನಿಧಾನವಾಗಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದ ಅವರು, ಕೂಲಿಕಾರ್ಮಿಕರು, ರೈತರು ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಾದರೆ ಮಾತ್ರ ದೇಶದ ನಿಜವಾದ ಪ್ರಗತಿ ಸಾಧ್ಯ ಎಂದರು.