28,329 ಬಿಬಿಎಂಪಿ ಪೌರಕಾರ್ಮಿಕರ ಕಾಯಂಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 28,329 ಪೌರಕಾರ್ಮಿಕರನ್ನು ಐಪಿಡಿ ಸಾಲಪ್ಪ ವರದಿಯಂತೆ ಕಾಯಂಗೊಳಿಸಬೇಕು ಎಂದು ಬಿಬಿಎಂಪಿ ಪೌರಕಾರ್ಮಿಕರ ಟ್ರೇಡ್ ಯೂನಿಯನ್ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.
'ಇತ್ತೀಚಿಗೆ ನಗರಾಭಿವೃದ್ಧಿ ಇಲಾಖೆ 11,133 ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ
'ಇತ್ತೀಚಿಗೆ ನಗರಾಭಿವೃದ್ಧಿ ಇಲಾಖೆ 11,133 ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಬಿಬಿಎಂಪಿಯ ನೇರ ನೇಮಕಾತಿ ಹಾಗೂ ಕ್ಷೇಮಾಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 3,763 ಹುದ್ದೆಗಳ ನೇರ ನೇಮಕಾತಿ ಆದೇಶವನ್ನು ಹಿಂಪಡೆಯಬೇಕು. ಬಿಬಿಎಂಪಿಯ 16,665 ನೇರ ವೇತನ ಪೌರಕಾರ್ಮಿಕರು, 4,646 ಆಟೋ ಟಿಪ್ಪರ್ ಚಾಲಕರು, 4,646 ಸಹಾಯಕರು, 593 ಕಾಂಪ್ಯಾಕ್ಟ್ ಚಾಲಕರು, 1,779 ಲೋಡರ್ಗಳು ಸೇರಿ ಒಟ್ಟು 28,329 ಕಾರ್ಮಿಕರನ್ನು ಕಾಯಂ ಗೊಳಿಸಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ' ಎಂದು ಸಮಿತಿಯ ಅಧ್ಯಕ್ಷ ಬಾಬು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಗುತ್ತಿಗೆ ಪದ್ಧತಿ ಯನ್ನು ರದ್ದುಗೊಳಿಸಿ ಐಪಿಡಿ ಸಾಲಪ್ಪ
ವರದಿಯಂತೆ ನೇರ ವೇತನ ಪಾವತಿ ಮಾಡುವಂತೆ ಆದೇಶ ಹೊರಡಿಸಿದ್ದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲವೇ ಕಾರ್ಮಿಕರನ್ನು ಕಾಯಂಗೊಳಿಸಿರುವುದು ಶ್ಲಾಘನೀಯ. ಇದರಿಂದ ಉಳಿದ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ.
ಎಲ್ಲರನ್ನು ಕಾಯಂಗೊಳಿಸಬೇಕು' ಎಂದು ಒತ್ತಾಯಿಸಿದರು.
'ಲೋಡರ್ಸ್, ವಾಹನ ಚಾಲಕರು, ಸಹಾಯಕರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನೇರ ವೇತನದ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಐಪಿಡಿ ಸಾಲಪ್ಪ ಅಧ್ಯಕ್ಷತೆಯಲ್ಲಿ ರಚನೆಯಾದ 'ಸ್ವೀಪರ್ಸ್ ಮತ್ತು ಸ್ಕ್ಯಾವೆಂಜರ್ಗಳ ಜೀವನ ಹಾಗೂ ಸೇವಾ ಸುಧಾರಣಾ ಸಮಿತಿ' ನೀಡಿದ್ದ 310 ಪುಟ 17 ಅಂಶಗಳ 96 ಶಿಫಾರಸುಗಳಲ್ಲಿ ಸರ್ಕಾರ ಅಂಗೀಕರಿಸಿರುವ 36 ಅಂಶಗಳನ್ನು ಕೂಡಲೇ ಜಾರಿಗೊಳಿಸಬೇಕು' ಎಂದು ಆಗ್ರಹಿಸಿದರು.