ಫುಡ್‌ ಪಾರ್ಸೆಲ್‌ ಕೊಡಲು ಹೋದ ಸ್ವಿಗ್ಗಿ ಏಜೆಂಟ್‌ ಮೇಲೆ ಎಗರಿ ಕೊಂದ ನಾಯಿ, ಮಾಲೀಕನ ವಿರುದ್ಧ ಕೇಸ್‌ ದಾಖಲು

ಫುಡ್‌ ಪಾರ್ಸೆಲ್‌ ಕೊಡಲು ಹೋದ ಸ್ವಿಗ್ಗಿ ಏಜೆಂಟ್‌ ಮೇಲೆ ಎಗರಿ ಕೊಂದ ನಾಯಿ, ಮಾಲೀಕನ ವಿರುದ್ಧ ಕೇಸ್‌ ದಾಖಲು

ಹೈದರಾಬಾದ್: 25ರ ಹರೆಯದ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್‌ನನ್ನು ನಾಯಿ ಬೆನ್ನಟ್ಟಿ ಸಾಯಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ನಾಯಿ ಮಾಲೀಕ ಶೋಬನಾ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ಆರೋಪದ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಮೃತನನ್ನು 23 ವರ್ಷದ ಮೊಹಮ್ಮದ್ ರಿಜ್ವಾನ್ ಎಂದು ಗುರುತಿಸಲಾಗಿದೆ. ಫುಡ್ ಡೆಲಿವರಿ ಆಯಪ್ ಸ್ವಿಗ್ಗಿಯಲ್ಲಿ ರಿಜ್ವಾನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ರಿಜ್ವಾನ್ ಬಂಜಾರಾ ಹಿಲ್ಸ್‌ನಲ್ಲಿರುವ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಗೆ ಪಾರ್ಸೆಲ್ ತಲುಪಿಸಲು ಹೋಗಿದ್ದ. ಈ ವೇಳೆ, ಗ್ರಾಹಕ ಶೋಬನಾ ಮನೆಯ ಬಾಗಿಲು ತೆರೆಯುತ್ತಿದ್ದಂತೇ ಅಲ್ಲೇ ಇದ್ದ ನಾಯಿ(ಜರ್ಮನ್ ಶೆಫರ್ಡ್‌) ಹಠಾತ್ತನೆ ರಿಜ್ವಾನ್ ಮೇಲೆ ದಾಳಿ ಮಾಡಿದೆ. ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ರಿಜ್ವಾನ್ ಮೂರನೇ ಮಹಡಿಯಿಂದ ಜಿಗಿದಿದ್ದಾನೆ. ಪರಿಣಾಮ ರಿಜ್ವಾನ್ ಗಾಯಗೊಂಡಿದ್ದ. ಕೂಡಲೇ ಅವನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ನಿಮ್ಸ್) ದಾಖಲಿಸಲಾಗಿತ್ತು. ಆದ್ರೆ, ರಿಜ್ವಾನ್ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ, ಜನವರಿ 14 ರಂದು ಕೊನೆಯುಸಿರೆಳೆದಿದ್ದಾನೆ.

ರಿಜ್ವಾನ್ ಅವರ ಸಹೋದರ ಮಹಮ್ಮದ್ ಖಾಜಾ ಅವರು ಗುರುವಾರ ರಾತ್ರಿ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಬಂಜಾರಾ ಹಿಲ್ಸ್ ಪೊಲೀಸರು ಶೋಭನಾ ವಿರುದ್ಧ ಸೆಕ್ಷನ್ 336 (ನಿರ್ಲಕ್ಷ್ಯದಿಂದ ಗಾಯಗಳಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.