ಅದೆಂತಾ ಪ್ರೀತಿ..? ಪ್ರೇಯಸಿ ಮಾತಾಡಿಲ್ಲ ಎಂದು ಸೇತುವೆಯಿಂದ ಶರಾವತಿ ನದಿಗೆ ಹಾರಿದ ಪ್ರೇಮಿ!

ಅದೆಂತಾ ಪ್ರೀತಿ..? ಪ್ರೇಯಸಿ ಮಾತಾಡಿಲ್ಲ ಎಂದು ಸೇತುವೆಯಿಂದ ಶರಾವತಿ ನದಿಗೆ ಹಾರಿದ ಪ್ರೇಮಿ!

ಹೊನ್ನಾವರ : ಅದ್ಯಾವುದೋ ಕಾರಣಕ್ಕೆ ಮುನಿಸಿಕೊಂಡ ಪ್ರೇಯಸಿ ತನ್ನ ಜೊತೆ ಮಾತಾಡಿಲ್ಲ ಎಂದು ಸಿಟ್ಟಾದ ಪ್ರೇಮಿಯೊಬ್ಬ ಶರಾವತಿ ಸೇತುವೆಯಿಂದ ನದಿಗೆ ಹಾರಿ ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ .

ತಾಲೂಕಿನ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯ ಜೊತೆ ಕಿರಿಕ್ ಮಾಡಿಕೊಂಡು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ . ಯುವಕನ ಅದೃಷ್ಟವೋ , ಹೆತ್ತವರ ಪುಣ್ಯವೋ ಯುವಕ ನದಿಗೆ ಹಾರಿದ ಸಮಯದಲ್ಲಿ ಅಲ್ಲಿಯೇ ಇದ್ದ ಮೀನುಗಾರರು ತಕ್ಷಣ ರಕ್ಷಣೆಗೆ ದಾವಿಸಿ ಯುವಕನನ್ನು ಬದುಕಿಸಿದ್ದಾರೆ ಎನ್ನಲಾಗಿದೆ .


ವಾರದ ಹಿಂದೆ ಮಂಕಿಯಲ್ಲಿ ಯುವಕನೊಬ್ಬ ಚಲಿಸುವ ರೈಲಿಗೆ ತಲೆ ಕೊಡಲು ಹೋಗಿದ್ದಾಗ ಪೊಲೀಸರು ರಕ್ಷಿಸಿದ್ದರು . ಆ ಘಟನೆ ಹಸಿಯಾಗಿರುವಾಗಲೇ ಸೇತುವೆಯಿಂದ ಹಾರಿ ಸಾಯಲು ಹೊರಟ ಮತ್ತೊಂದು ಘಟನೆ ನಡೆದಿದೆ . ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲವಾದರೂ ಪ್ರೀತಿ ಪ್ರೇಮ ಎಂದು ಕ್ಷುಲ್ಲಕ ಕಾರಣಗಳಿಗೆ ಅಮೂಲ್ಯವಾದ ಬದುಕನ್ನು ಅಂತ್ಯಮಾಡಿಕೊಳ್ಳಲು ಮುಂದಾಗುವ , ಕೋಪದ ಕೈಯಲ್ಲಿ ಬುದ್ಧಿಯನ್ನು ಕೊಟ್ಟು ಅವಿವೇಕಿಗಳಂತೆ ವರ್ತಿಸುವ ಯುವಕ ಯುವತಿಯರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ . ಮನೆ ಮಂದಿಯೆಲ್ಲಾ ಹಬ್ಬದ ಸಂಭ್ರಮದಲ್ಲಿರುವಾಗ ತನ್ನ ಬದುಕನ್ನು ಕೊನೆಯಾಗಿಸಲು ಹೊರಟ ಯುವಕ ಮೀನುಗಾರರ ಸಹಾಯ ಸಿಗದೇ ಹೆಣವಾಗಿದ್ದರೆ ಮುಂದಿನ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿರಲಿಲ್ಲ . ಸಾವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ . ಸತ್ತು ಸಾಧಿಸುವುದು ಏನೂ ಇಲ್ಲ . ಇದ್ದು ಸವಾಲುಗಳನ್ನು ಜಯಿಸಬೇಕು ಎನ್ನುವ ಕಿವಿಮಾತನ್ನು ಹದಿ ಹರೆಯದವರು ಅರ್ಥಮಾಡಿಕೊಳ್ಳಬೇಕಿದೆ .