ಹೊರ ಗುತ್ತಿಗೆ ಕಾರ್ಮಿಕರ ಹಿತಕ್ಕಾಗಿ ಹೊಸ ಕಾಯ್ದೆ: ಸಚಿವ ಹೆಬ್ಬಾರ
ಕಾರವಾರ: 'ಹೊರ ಗುತ್ತಿಗೆ ಕಾರ್ಮಿಕರ ಹಿತ ಕಾಯುವ ಸಲುವಾಗಿ ರಾಜ್ಯದಲ್ಲಿ ಹೊಸ ಕಾಯ್ದೆಯನ್ನು ರೂಪಿಸಲಾಗುತ್ತಿದೆ. ಇದು ಜಾರಿಯಾದ ಬಳಿಕ ಉದ್ಯೋಗದಾತರು ಕಾರ್ಮಿಕರ ಭವಿಷ್ಯ ನಿಧಿ ಪಾವತಿಸಿದ ದಾಖಲೆಯ ಪ್ರತಿಯೊಂದನ್ನು, ಪ್ರತಿ ತಿಂಗಳು 30ನೇ ತಾರೀಕಿನಂದು ಇಲಾಖೆಗೆ ಕಡ್ಡಾಯವಾಗಿ ತಲುಪಿಸಬೇಕಾಗುತ್ತದೆ' ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಹೊರ ಗುತ್ತಿಗೆ ನೌಕರಿಯು ಶೋಷಣೆಯ ಮಾರ್ಗ ಹಿಡಿದಿದೆ ಎಂಬ ಆರೋಪಗಳಿವೆ. ಹಲವು ಸಂಸ್ಥೆಗಳು, ಏಜೆನ್ಸಿಗಳು ಕಾರ್ಮಿಕರ ಭವಿಷ್ಯ ನಿಧಿ (ಪಿ.ಎಫ್), ಕಾರ್ಮಿಕರ ವಿಮೆ (ಇ.ಎಸ್.ಐ) ಪಾವತಿಸುತ್ತಿಲ್ಲ, ವೇತನ ಸರಿಯಾಗಿ ಕೊಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಕೆಲಸದಿಂದ ವಜಾ ಮಾಡುತ್ತಾರೆ ಎಂಬ ದೂರುಗಳಿವೆ. ಲಗಾಮು ಇಲ್ಲದ ಕುದುರೆಯಂತೆ ಈ ವಲಯ ಸಾಗುತ್ತಿದೆ. ಹಾಗಾಗಿ ಅದರ ನಿಯಂತ್ರಣಕ್ಕೆ ನಮ್ಮ ಇಲಾಖೆ ಮುಂದಾಗಿದೆ' ಎಂದು ಅವರು ಹೇಳಿದರು.
'ಹೊಸ ಮಸೂದೆಯ ಪ್ರಕಾರ ಯಾರೂ ಪಿ.ಎಫ್, ಇ.ಎಸ್.ಐ, ವೇತನ ಪಾವತಿಸದಿರಲು ಸಾಧ್ಯವಿಲ್ಲ. ಇದು ಸರ್ಕಾರಿ ಹಾಗೂ ಸರ್ಕಾರೇತರ - ಎರಡೂ ವಲಯಗಳ ಸಂಸ್ಥೆಗಳಿಗೆ ಅನ್ವಯಿಸುತ್ತದೆ' ಎಂದು ಸ್ಪಷ್ಟಪಡಿಸಿದರು.
'ಇದೇ ರೀತಿ, ಕಾರ್ಮಿಕ ಇಲಾಖೆಯಲ್ಲಿ ಆ.16ರಿಂದ ಸೆ.15ವರೆಗೆ ರಾಜ್ಯದಾದ್ಯಂತ 'ಕಡತ ವಿಲೇವಾರಿ ಅಭಿಯಾನ' ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಪಿಂಚಣಿಯಂಥ ಯಾವುದೇ ಅರ್ಜಿಗಳೂ ಬಾಕಿ ಉಳಿಯಬಾರದು ಎಂದು ನಿರ್ದೇಶನ ನೀಡಲಾಗಿದೆ' ಎಂದು ತಿಳಿಸಿದರು.