ಮೋದಿ ಭದ್ರತೆಗೆ ಬೇಕೆಂದರೂ ವಾಹನ ಕೊಡಲಿಲ್ಲ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭದ್ರತೆಗೆ ಸರ್ಕಾರಿ ವಾಹನ ಕೊಡುವಂತೆ ಸೂಚಿಸಿದ ಮಹಿಳಾ ಬ್ರೇಕ್ ಇನ್ಸ್ಪೆಕ್ಟರ್ ಜತೆ ಕಾರು ಚಾಲಕ ವಾಗ್ವಾದ ನಡೆಸಿರುವ ಪ್ರಕರಣ ವರದಿಯಾಗಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರ್ಟಿಒ ಅಧಿಕಾರಿಗಳು, ರಸ್ತೆಯಲ್ಲಿ ಅಡ್ಡಗಟ್ಟಿ ಸರ್ಕಾರಿ ವಾಹನ ಕೊಂಡೊಯ್ಯುವ ಹೊಣೆಗಾರಿಕೆ ಕಿರಿಕಿರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಕೇಂದ್ರ ಗೃಹ ಸಚಿವರು ಸೇರಿ ಇನ್ನಿತರ ಗಣ್ಯಾತಿ ಗಣ್ಯ ವ್ಯಕ್ತಿಗಳು ರಾಜ್ಯಕ್ಕೆ ಬಂದಾಗ ಶಿಷ್ಟಾಚಾರಕ್ಕಾಗಿ ಸರ್ಕಾರಿ ವಾಹನಗಳ ವ್ಯವಸ್ಥೆ ಮಾಡಬೇಕು. ಪ್ರತ್ಯೇಕ ವಾಹನಗಳಿಲ್ಲದ ಕಾರಣಕ್ಕೆ ಬೇರೆ ಸರ್ಕಾರಿ ಇಲಾಖೆ/ ಕಚೇರಿಗಳಿಗೆ ಕೊಟ್ಟಿರುವ ವಾಹನಗಳನ್ನು ಬಳಸಲಾಗುತ್ತಿದೆ. ಶಿಷ್ಟಾಚಾರಕ್ಕೆ ಬೇಕಾಗಿರುವ ವಾಹನಗಳನ್ನು ಹೊಂದಿಸುವ ಜವಾಬ್ದಾರಿಯನ್ನು ಆಯಾ ಡಿಸಿಗಳು ಸಾರಿಗೆ ಆಯುಕ್ತರ ಮುಖಾಂತರ ಆರ್ಟಿಒ ಅಧಿಕಾರಿಗಳಿಗೆ ವಹಿಸುವ ವ್ಯವಸ್ಥೆ ಇದೆ.
ಇತ್ತೀಚೆಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದಾಗ ವಾಹನ ವ್ಯವಸ್ಥೆ ಮಾಡಲು ಡಿಸಿ ಸೂಚಿಸಿದ್ದರು. ಫೆ.9ರಂದು ಸಂಜೆ 5 ಗಂಟೆಯಲ್ಲಿ ಕೆ.ಜಿ. ರಸ್ತೆಯಲ್ಲಿ ಬಂದ ವಾಣಿಜ್ಯ ತೆರಿಗೆ ಇಲಾಖೆಗೆ ಸೇರಿದ ಮಹೀಂದ್ರ ಸ್ಕಾರ್ಪಿಯೋ (ಕೆಎ-02-ಜಿ.2026) ವಾಹನವನ್ನು ಹಿರಿಯ ಮೋಟಾರು ನಿರೀಕ್ಷಕಿ ವಿನಯಾ ಚೌಧರಿ ತಡೆದಿದ್ದರು. ಆದರೆ, ವಾಹನ ಚಾಲಕ ನಿಲ್ಲಿಸದೆ ವಾಣಿಜ್ಯ ತೆರಿಗೆ ಕಚೇರಿ ಆವರಣಕ್ಕೆ ಹೋಗಿದ್ದ. ಹಿಂಬಾಲಿಸಿ ಹೋಗಿ ಅಡ್ಡ ಹಾಕಿದ್ದರು.
ಡಿಸಿ ಆದೇಶ ತೋರಿಸಿ ಪ್ರಧಾನಿ ಭದ್ರತೆಗೆ ವಾಹನ ಬೇಕೆಂದು ಕೇಳಿದರೂ 'ನನ್ನ ಕೆಲಸ ಮುಗಿಯಿತು. ಬರುವುದಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ' ಎಂದು ಏರುಧ್ವನಿಯಲ್ಲಿ ಹೇಳಿ ಹೋಗಿದ್ದ. ಆಗ ಕಮಾಂಡಿಂಗ್ ನೋಟಿಸ್ ಅನ್ನು ವಾಹನ ಮುಂಭಾಗದಲ್ಲಿ ಅಂಟಿಸಿ, ಫೆ.10ರಂದು ಚಾಲಕನ ವಿರುದ್ಧ ಕೇಸ್ ದಾಖಲಿಸಿ ನೋಟಿಸ್ ನೀಡಿರುವುದಾಗಿ ವಿನಯಾ ಚೌಧರಿ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.