ಮೂಡುಬಿದಿರೆಯ ಮಿಶೆಲ್‌ಗೆ ಡಿಆರ್‌ಐ ಶೌರ್ಯ ಪ್ರಶಸ್ತಿ

ಮೂಡುಬಿದಿರೆಯ ಮಿಶೆಲ್‌ಗೆ ಡಿಆರ್‌ಐ ಶೌರ್ಯ ಪ್ರಶಸ್ತಿ

ಮೂಡುಬಿದಿರೆ: ಮಾದಕ ದ್ರವ್ಯ ಸಾಗಿಸುತ್ತಿದ್ದ ನೈಜೀರಿಯಾ ವ್ಯಕ್ತಿಗಳನ್ನು ಬೆಂಬತ್ತಿ ವಶಕ್ಕೆ ತೆಗೆದುಕೊಂಡ ರೆವೆನ್ಯೂ ಇಂಟೆಲಿಜೆನ್ಸ್‌ ನಿರ್ದೇಶನಾಲಯದ ಮುಂಬಯಿ ಪ್ರಾಂತೀಯ ಘಟಕದ ಉಪ ನಿರ್ದೇಶಕಿ, ಮೂಡುಬಿದಿರೆಯ ನೀರುಡೆ ಮೂಲದವರಾದ ಮಿಶೆಲ್‌ ಕ್ವೀನಿ ಡಿ’ಕೋಸ್ಟಾ ಅವರಿಗೆ ಸೋಮವಾರ ಹೊಸದಿಲ್ಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 2022ರ ಸಾಲಿನ ಡಿಆರ್‌ಐ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿ ಮಿಶೆಲ್‌ ಅವರ ಕಾರ್ಯತತ್ಪರತೆ, ಶೌರ್ಯ ಮನೋಭಾವಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ ನೈಜೀರಿಯ ಪ್ರಜೆಗಳು 1.9 ಕೆಜಿ ತೂಕದ ಮಾದಕ ದ್ರವ್ಯದ ಮಾತ್ರೆಗಳ ಸಹಿತ ಕಸ್ಟಮ್ಸ್‌ ತಂಡದ ಕಾರ್ಯಾಚರಣೆ ವೇಳೆ ನಾಲ್ಕನೇ ಮಹಡಿಯಿಂದ ಜಿಗಿದು ಪರಾರಿಯಾಗಲೆತ್ನಿಸಿದಾಗ ಜೀವದ ಹಂಗು ತೊರೆದು ಏಕಾಂಗಿಯಾಗಿ ಅವರ ಬೆಂಬತ್ತಿ ದೈಹಿಕವಾಗಿ ಅಡ್ಡಗಟ್ಟಿ, ಕಾರ್ಯಾಚರಣೆ ತಂಡಬರುವವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.ಮಿಶೆಲ್‌ ಅವರು ನೀರುಡೆಯ ಪ್ರಗತಿ ಪರ ಕೃಷಿಕ ಲಾಝರಸ್‌ ಡಿ’ಕೋಸ್ಟ ಅವರ ಪುತ್ರಿ. 2015ರ ಯುಪಿಎಸ್‌ಸಿ ಸಿವಿಲ್‌ ಸರ್ವಿಸ್‌ ಪರೀಕ್ಷೆಯಲ್ಲಿ 387ನೇ ರ್‍ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದರು. ಅದೇ ವರ್ಷ ಜಿಎಸ್‌ಟಿ ಅಸಿಸ್ಟೆಂಟ್‌ ಕಮಿಷನರ್‌ ಆಗಿ ನೇಮಕಗೊಂಡಿದ್ದರು.