2023-24ನೇ ಸಾಲಿನ ವಸತಿ ಶಾಲೆ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 2023-24ನೇ ಸಾಲಿಗೆ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ 6ನೇ ತರಗತಿಯಿಂದ 10 ನೇ ತರಗತಿಯವರೆಗೆ ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 06 ರಿಂದ 12 ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ರೂ.2.50 ಲಕ್ಷಗಳು, ಪರಿಶಿಷ್ಟ ವರ್ಗದವರಿಗೆ ರೂ.2.50 ಲಕ್ಷಗಳು ಹಾಗೂ ಹಿಂದುಳಿದ ವರ್ಗದ ಪ್ರವರ್ಗ-1 ರವರಿಗೆ ರೂ. 2.50 ಲಕ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ರವರಿಗೆ ರೂ. 1 ಲಕ್ಷಗಳ ಆದಾಯ ಮಿತಿ ಇರುತ್ತದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೇ.50 ರಷ್ಟು ಸೀಟುಗಳು ವಿದ್ಯಾರ್ಥಿನಿಯರಿಗೆ ಲಭ್ಯವಿರುತ್ತದೆ. ಒಮ್ಮೆ ಈ ವಸತಿ ಶಾಲೆಗಳಿಗೆ ವಿದ್ಯಾರ್ಥಿ ಸೇರಿದಲ್ಲಿ 12 ನೇ ತರಗತಿಯವರೆಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಬಹುದು.
ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 2022-23ನೇ ಸಾಲಿನಲ್ಲಿ 6ನೇ ತರಗತಿಗೆ 50 ವಿದ್ಯಾರ್ಥಿಗಳನ್ನು, ಅಟಲ್ ಬಿಹಾರಿ ವಾಜಪೇಯಿ ಶಾಲೆಗಳಲ್ಲಿ 6 ನೇ ತರಗತಿ 80 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುವುದು. ಪ್ರಸ್ತುತ ಕರ್ನಾಟಕದ ಯಾವುದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಈಗಾಗಲೇ ಮಾಡಿರುವ ಅರ್ಹ ವಿದ್ಯಾರ್ಥಿಗಳು ಈ ಬಗ್ಗೆ ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಅರ್ಹತೆ ಮತ್ತು ಮೀಸಲಾತಿಯಂತೆ ಪಟ್ಟಿ ತಯಾರಿಸಿ, ಮೆರಿಟ್ ಆಧಾರದ ಮೇಲೆ ಮೀಸಲಾತಿ ಅನ್ವಯ ಕೌನ್ಸಲಿಂಗ್ ಮೂಲಕ ಆಯ್ಕೆ ಮಾಡಲಾಗುವುದು. ಮೊದಲ ಪ್ರಾಶಸ್ತ್ಯವಾಗಿ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಇತರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಎರಡನೇ ಆಧ್ಯತೆ ನೀಡಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಪ್ರಾಧಿಕಾರದ ವೆಬ್‍ಸೈಟ್ ಅಲ್ಲಿ ಅರ್ಜಿ ಸಲ್ಲಿಸಬಹುದು.