ಹೋರಾಟಗಾರರೊಂದಿಗಿದ್ದು ಪ್ರಚಾರ ಪಡೆದ ಖಾದರ್ ಗೆ ಟೋಲ್ ಗೇಟ್ ತೆರವು ಮಾಡಲು ಸಾಧ್ಯವಾಯಿತೆ

ಹೋರಾಟಗಾರರೊಂದಿಗಿದ್ದು ಪ್ರಚಾರ ಪಡೆದ ಖಾದರ್ ಗೆ ಟೋಲ್ ಗೇಟ್ ತೆರವು ಮಾಡಲು ಸಾಧ್ಯವಾಯಿತೆ

ಮಂಗಳೂರು: ಅಧಿಕಾರದಲ್ಲಿದ್ದಾಗ ಟೋಲ್ ಗೇಟ್ ತೆರವು ಮಾಡುವ ಮಾತು ನೀಡಿ ಹೋರಾಟಗಾರರ ಜೊತೆ ಭಾಗವಹಿಸಿ ಪ್ರಚಾರ ಪಡೆದುಕೊಂಡು ಎದ್ದು ಹೋಗಿರುವ ಶಾಸಕ ಯು.ಟಿ. ಖಾದರ್ ಅವರಿಗೆ ಟೋಲ್ ಗೇಟ್ ತೆರವಿಗೆ ಪ್ರಕ್ರಿಯೆ ಆರಂಭಿಸಲೂ ವಿಫಲರಾಗಿ, ಇದೀಗ ನನ್ನ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಸ್ಪದ ಎಂದು ಶಾಸಕ ಡಾ.

ಭರತ್ ಶೆಟ್ಟಿ ವೈ., ಯು.ಟಿ ಖಾದರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಮಾತುಕತೆ ಮಾಡಿರುವೆ ಎಂದು ಯು.ಟಿ ಖಾದರ್ ಹೇಳಿಕೊಂಡು ಬಂದಿದ್ದಾರೆ ಆದರೆ ರಾಜ್ಯದಿಂದ ಕೇಂದ್ರದ ಹೆದ್ದಾರಿ ಇಲಾಖೆಗೆ ಕಾನೂನಾತ್ಮಕವಾಗಿ ಅಧಿಕೃತ ಪತ್ರವನ್ನು ಕಳಿಸಲು ಕೂಡ ಇವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ ನಿಂದ ಇಂತಹ ಆರೋಪಗಳು ನಿರೀಕ್ಷಿತ ಎಂದು ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಇರ್ಕಾನ್ ಸಂಸ್ಥೆ ಹಾಗೂ ನವಯುಗ ಖಾಸಗಿ ಸಂಸ್ಥೆಯು ಟೋಲ್ ಗೇಟ್ ಸ್ಥಾಪಿಸಲು ಅವಕಾಶ ನೀಡುವ ಸಲುವಾಗಿ 2013ರ ಮಾರ್ಚ್ ನಲ್ಲಿ ಹೆಜಮಾಡಿ ಟೋಲ್ ಗೇಟ್, ಜೂನ್ ನಲ್ಲಿ ಸುರತ್ಕಲ್ ನಲ್ಲಿ ಟೋಲ್ ಗೇಟ್ ನಿರ್ಮಿಸಲು ಈ ಹಿಂದಿನ ಯುಪಿಎ ಸರಕಾರವೇ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿ ಕೊಡುಗೆ ನೀಡಿದೆ ಎಂದು ಬಹಿರಂಗಪಡಿಸಿರುವ ಡಾ.ಭರತ್ ಶೆಟ್ಟಿ ವೈ. ಅಂದೇ ಹಿಂಪಡೆಯಲು ಇದ್ದ ಅವಕಾಶವನ್ನು ಕೈ ಚೆಲ್ಲಿರುವ ಕಾಂಗ್ರೆಸ್ ರಾಜಕೀಯಕ್ಕಾಗಿ ಇದೀಗ ಲಾಭ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದರು.

ನನಗೆ ಕೇವಲ ಆಶ್ವಾಸನೆ ನೀಡಿ ಹಿಂದೆ ಹೋಗುವುದರಲ್ಲಿ ಆಸಕ್ತಿ ಇಲ್ಲ. ಗಂಭೀರವಾದ ಪ್ರಯತ್ನವನ್ನು ನಡೆಸಿ ಸಂಸದರ ಮುತುವರ್ಜಿಯಲ್ಲಿ ಟೋಲ್ ಗೇಟ್ ತೆರವುಗೊಳಿಸಲು ಯಶಸ್ವಿಯಾಗಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.