ಚಿಕ್ಕಮಗಳೂರು: ಕಾಂಗ್ರೆಸ್ ಸೇರುವ ಮುನ್ನವೇ ಟಿಕೆಟ್ ಆಸೆ ಹೊರಹಾಕಿದ ತಮ್ಮಯ್ಯ

ಚಿಕ್ಕಮಗಳೂರು: ಕಳೆದ 18 ವರ್ಷದಿಂದ ಬಿಜೆಪಿ ಬ್ಯಾನರ್ ಹಿಡಿದು, ಬಾವುಟ ಕಟ್ಟಿ ವಿವಿಧ ಹುದ್ಧೆಗಳನ್ನ ನಿರ್ವಹಿಸಿದ್ದೇನೆ. ನನಗೂ ಚಿಕ್ಕಮಗಳೂರು ತಾಲೂಕಿನ ಬಿಜೆಪಿ ಟಿಕೆಟ್ ಬೇಕೆಂದು ಹಾಲಿ ಶಾಸಕ ಸಿ.ಟಿ.ರವಿ ವಿರುದ್ಧ ತೊಡೆ ತಟ್ಟಿ ಟಿಕೆಟ್ ಕೇಳಿದ್ದ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಬಿಜೆಪಿಗೆ ಗುಡ್‍ಬೈ ಹೇಳಿ ಕಾಂಗ್ರೆಸ್ ಸೇರಲು ಬೆಂಬಲಿಗರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಅತೃಪ್ತ ಆಪ್ತರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಹೆಚ್.ಡಿ.ತಮ್ಮಯ್ಯ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಲಿಂಗಾಯುತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ತಮ್ಮಯ್ಯ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಸಿ.ಟಿ.ರವಿ ವಿರುದ್ಧ ಬದಲಾವಣೆಯ ಸಂಕಲ್ಪ ಯಾತ್ರೆ ಆರಂಭಿಸಿರೋ ಹೆಚ್.ಡಿ.ತಮ್ಮಯ್ಯ ಇದೇ 19ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನೂರಾರು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಲಿದ್ದಾರೆ.
ನಿನ್ನೆ ತಾನೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹೆಚ್.ಡಿ ತಮ್ಮಯ್ಯ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಆದರೆ, ಕಾಂಗ್ರೆಸ್‍ಗೆ ನಾನು ಯಾವುದೇ ಬೇಡಿಕೆ ಇಲ್ಲದೆ ಸೇರುತ್ತೇನೆ. ಈಗಾಗಲೇ 6 ಜನ ಟಿಕೆಟ್‍ಗಾಗಿ ಅರ್ಜಿ ಹಾಕಿದ್ದಾರೆ. ಗಾಯತ್ರಿ ಶಾಂತೇಗೌಡ ಹಾಕಿಲ್ಲ. ಅವರು ಹಾಗೂ ನನ್ನನ್ನ ಸೇರಿಸಿ ಸರ್ವೇ ಮಾಡಿಸಲಿ. ಎಂಟು ಜನರ ಹೆಸರಿನಲ್ಲೂ ಸರ್ವೇ ಮಾಡಿಸುತ್ತೇವೆ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ವೇ ಮಾಡಿಸಿ ಟಿಕೆಟ್ ನೀಡುತ್ತಿದೆ. ಯಾರಿಗೆ ಟಿಕೆಟ್ ಕೊಟ್ಟರೂ ನಾನು ಬೆಂಬಲ ನೀಡಲು ಸಿದ್ಧ. ನನಗೆ ಸಿಕ್ಕರೆ ಎಲ್ಲರೂ ಬೆಂಬಲ ನೀಡಲಿ ಎಂದು ಕೇಳಿಕೊಂಡಿದ್ದಾರೆ. ನನಗೆ ಕಾಂಗ್ರೆಸ್ ಹೊಸದಲ್ಲ. ನಮ್ಮ ತಾತನ ಕಾಲದಿಂದಲೂ ನಾವು ಕಾಂಗ್ರೆಸ್‍ನಲ್ಲೇ ಇರೋದು. 2004ರಲ್ಲಿ ಬಿಜೆಪಿ ಸೇರಿದ್ದು. ನಾನು ಬೈ ಬರ್ತ್ ಕಾಂಗ್ರೆಸ್ ಎಂದಿದ್ದಾರೆ. ಸರಳವಾಗಿ ಕಾಂಗ್ರೆಸ್ ಸೇರಿ ಎಂದಿದ್ದಾರೆ. ಆದರೆ, ಇಲ್ಲಿ ಸಭೆಯಲ್ಲಿ ಸೇರಿರೋ ಎಲ್ಲರೂ ನಾವು ಬರುತ್ತೇವೆ ಎಂದಿದ್ದಾರೆ. ಇಲ್ಲಿರುವವರು ಎಲ್ಲರೂ ಕೆಪಿಸಿಸಿ ಕಚೇರಿಗೆ ಬಂದರೆ ಎಲ್ಲರೂ ಕಾಂಗ್ರೆಸ್ ಸೇರಿದಂತೆ ಎಂದಿದ್ದಾರೆ.