ಆಪರೇಷನ್ ಜೆಡಿಎಸ್ಗೆ ಕೈ ಹಾಕಿದ ಎಚ್ಡಿಕೆ: ಹುಬ್ಬಳ್ಳಿಯಲ್ಲಿ ಬಿಜೆಪಿಯ ವಿಕೆಟ್ ಪತನ ಆಗೋದು ಖಚಿತ

ಹುಬ್ಬಳ್ಳಿ: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾನಾ ಕಸರತ್ತು ಹಾಗೂ ತಂತ್ರಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಉತ್ತರ ಕರ್ನಾಟಕದತ್ತ ತಮ್ಮ ಗಮನ ಹರಿಸಿರುವ ಎಚ್ಡಿಕೆ ಆಪರೇಷನ್ ಜೆಡಿಎಸ್ಗೆ ಕೈ ಹಾಕಿದ್ದಾರೆ.
ಉತ್ತರ ಕರ್ನಾಟಕದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನು ದಳಪತಿ ಟಾರ್ಗೆಟ್ ಮಾಡಿದ್ದಾರೆ. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಜಾಗಕ್ಕೆ ಬೇರೆ ಪ್ರಭಾವಿ ನಾಯಕರನ್ನು ಕರೆತರಲು ಮುಂದಾಗಿದ್ದಾರೆ. ಅದರಲ್ಲೂ ಟಿಕೆಟ್ ತಪ್ಪುವ ಭೀತಿಯಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಜೊತೆ ದಳಪತಿ ಕುಮಾರಸ್ವಾಮಿ ರಹಸ್ಯ ಮೀಟಿಂಗ್ ಮಾಡಿದ್ದಾರೆ.
ಒಂದೇ ತಿಂಗಳ ಅವಧಿಯಲ್ಲಿ ಬಿಜೆಪಿ ಮಾಜಿ ಶಾಸಕರನ್ನು ಎಚ್ಡಿಕೆ ಎರಡು ಬಾರಿ ಭೇಟಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿಯ ಒಂದು ವಿಕೆಟ್ ಪತನ ಆಗುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿಗೆ ಜೆಡಿಎಸ್ ಗಾಳ ಹಾಕಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಹಾಲರವಿ ಜೊತೆ ಎಚ್ಡಿಕೆ ಮಾತುಕತೆ ನಡೆಸಿದ್ದಾರೆ.
2103ರಲ್ಲಿ ಬಿಜೆಪಿಯಿಂದ ಗೆದ್ದು ಹಾಲರವಿ ಶಾಸಕರಾಗಿದ್ದರು. ಕಳೆದ ಬಾರಿ ಹು-ಧಾ ಪಶ್ಚಿಮ ಕ್ಷೇತ್ರದ ಕೈ ಅಭ್ಯರ್ಥಿ ಇಸ್ಮಾಯಿಲ್ ತಮಾಟಗಾರ ಅವರನ್ನೂ ಎಚ್ಡಿಕೆ ಭೇಟಿ ಆಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತರು ಮತ್ತು ಮುಖಂಡರೇ ಜೆಡಿಎಸ್ ಟಾರ್ಗೆಟ್ ಆಗಿದ್ದು, ಉತ್ತರ ಕರ್ನಾಟಕದಲ್ಲಿ ಕಮಲ ಮತ್ತು ಕೈ ಬಗ್ಗು ಬಡೆಯಲು ಎಚ್ಡಿಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.