ಪೊಲೀಸ್ ನೌಕರಿ ಕೊಡಿಸುವುದಾಗಿ ವಂಚನೆ ಆರೋಪಿಗಾಗಿ ಪೊಲೀಸರಿಂದ ಹುಡುಕಾಟ

ಪೊಲೀಸ್ ನೌಕರಿ ಕೊಡಿಸುವುದಾಗಿ ವಂಚನೆ ಆರೋಪಿಗಾಗಿ ಪೊಲೀಸರಿಂದ ಹುಡುಕಾಟ

ಕಾರವಾರ: ಉತ್ತರ ಕನ್ನಡವೂ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯುವಕರಿಗೆ ಪೊಲೀಸ್ ನೌಕರಿಯನ್ನು ನೇರ ನೇಮಕಾತಿ ಮೂಲಕ ಕೊಡಿಸುವುದಾಗಿ ನಂಬಿಸಿ ಆರೋಪಿಯೋರ್ವ ವಂಚಿಸುತ್ತಿದ್ದು ಈತನ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸ್‌ಪಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.

ಕಾರವಾರದ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹಾವೇರಿ ಜಿಲ್ಲೆಯ ಬ್ಯಾಡಗಿಯ ಸಂತೋಷ ತಿಪ್ಪಣ್ಣ ಗುದಗಿ ಎಂಬಾತ ಆರೋಪಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಮುಂಡಗೋಡ ಪಟ್ಟಣದ ಗುರುರಾಯ ರಾಯ್ಕರ ಎನ್ನುವವರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸ್ಥಳಗಳಿಗೆ ವಿಶೇಷ ಕೋಟಾದಡಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಯ ಒಟ್ಟು 12 ಅಭ್ಯರ್ಥಿಗಳಿಗೆ ನೇರ ನೇಮಕಾತಿ ಮೂಲಕ ನೌಕರಿ ಕೊಡಿಸುವುದಾಗಿ ಸುಳ್ಳು ಹೇಳಿ ಒಬ್ಬ ಅಭ್ಯರ್ಥಿಯಿಂದ 02 ಲಕ್ಷ ಹಣವನ್ನು ಮುಂಗಡವಾಗಿ ಬ್ಯಾಂಕ ಅಕೌಂಟ್ ಮೂಲಕ ಪಡೆದುಕೊಂಡಿರುವುದು ತಿಳಿದು ಬಂದಿದೆ. ಅಲ್ಲದೆ ಆರೋಪಿಯು ಸುಳ್ಳು ನೇಮಕಾತಿ ಆದೇಶವನ್ನು ಕೊಟ್ಟಿಯಾಗಿ ತಯಾರಿಸಿ ಅಭ್ಯರ್ಥಿಗಳಿಗೆ ಮೋಸ ಮಾಡಿದ ಬಗ್ಗೆಯೂ ಪ್ರಕರಣ ದಾಖಲಾಗಿವೆ. ಆರೋಪಿ ಸಂತೋಷ ಈತನು ತಾನು ಬೆಂಗಳೂರು ನಗರದಲ್ಲಿ ಪೊಲೀಸ್ ಕರ್ತವ್ಯದಲ್ಲಿರುವುದಾಗಿ ಅಭ್ಯರ್ಥಿಗಳಿಗೆ ನಂಬಿಸಿ ವಿಶೇಷ ಕೋಟಾದಡಿ ಪೊಲೀಸ್ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಸುಳ್ಳು ಹೇಳಿ ನಕಲಿ ಆದೇಶದ ಪ್ರತಿಯನ್ನು ತಯಾರು ಮಾಡಿದ ಬಗೆಯೂ ಪ್ರಕರಣ ದಾಖಲಾಗಿವೆ. ಆರೋಪಿಯು ಇದೇ ರೀತಿ ಬೆಂಗಳೂರಿನಲ್ಲಿ ನೇಮಕಾತಿ ಮಾಡಿಸುವುದಾಗಿ ಮೋಸ ಮಾಡಿದ್ದರಿಂದ ಇಲಾಖೆಯಿಂದ ಇವನನ್ನು ಈಗಾಗಲೇ ಡಿಸ್ಮಿಸ್ ಮಾಡಲಾಗಿದೆ ಎಂದು ತಿಳಿದು ಬಂದಿರುತ್ತದೆ.

ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು ಆರೋಪಿಯ ತಲಾಷೆಗಾಗಿ ಜಾಲ ಬೀಸಲಾಗಿದೆ. ಆರೋಪಿಯು ಇನ್ನೂ ಬೇರೆ ಕಡೆ ಜನರಿಗೆ ಮೋಸ ಮಾಡಿರಬಹುದು. ಕಾರಣ ಅಂತವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಬಹುದಾಗಿದೆ ಎಂದು ಎಸ್‌ಪಿ ಶಿವಪ್ರಕಾಶ ದೇವರಜು ಅವರು ತಿಳಿಸಿದ್ದಾರೆ.