ಪ್ರತಿಭಟನೆಗೆ ನಿರಾಕರಣೆ ಸಂವಿಧಾನಕ್ಕೆ ಎಸಗಿದ ಅಪಚಾರ: ರಿಯಾಝ್ ಕಡಂಬು

ಪ್ರತಿಭಟನೆಗೆ ನಿರಾಕರಣೆ ಸಂವಿಧಾನಕ್ಕೆ ಎಸಗಿದ ಅಪಚಾರ: ರಿಯಾಝ್ ಕಡಂಬು

ಮಂಗಳೂರು : ಎಸ್‌ಡಿಪಿಐಯ ಜಿಲ್ಲಾ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಪಕ್ಷದ ರಾಜ್ಯ ಸಮಿತಿಯ ಸದಸ್ಯ ರಿಯಾಝ್ ಕಡಂಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಐಎ ತನಿಖಾ ಸಂಸ್ಥೆಯು ಎಸ್‌ಡಿಪಿಐ ನಾಯಕರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವುದು ಖಂಡನೀಯ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಇದನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು ಯಾವ ನೋಟಿಸ್ ಕೂಡ ನೀಡದೆ ಬಂಧಿಸಿದ್ದಾರೆ. ಇವರು ಎಲ್ಲೂ ಅಡಗಿ ಕುಳಿತಿರಲಿಲ್ಲ. ಶಾಫಿ ಬೆಳ್ಳಾರೆ ಅವರು ಸಾರ್ವಜನಿಕ ಸಭೆಗಳು, ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು, ಗ್ರಾಪಂ ಸದಸ್ಯರಾಗಿರುವ ಇಕ್ಬಾಲ್ ಬೆಳ್ಳಾರೆ ಗ್ರಾಮಸಭೆಯಲ್ಲೂ ಭಾಗವಹಿಸಿದ್ದಾರೆ. ನೋಟಿಸ್ ನೀಡಿರುತ್ತಿದ್ದರೆ ನಮ್ಮ ನಾಯಕರನ್ನು ಕಳುಹಿಸಲು ಪಕ್ಷ ತಯಾರಾಗಿತ್ತು. ಆದರೂ ಈ ರೀತಿ ಬಂಧಿಸುವ ಅಗತ್ಯ ಏನು ಎಂದು ಪ್ರಶ್ನಿಸಿದರು.

ಎಸ್‌ಡಿಪಿಐ ನಾಯಕರ ಬಂಧನ ಖಂಡಿಸಿ ಸೋಮವಾರ ಮಾಡಲು ಉದ್ದೇಶಿಸಿದ್ದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ನಮ್ಮ ಸಾಂವಿಧಾನಿಕ ಹಕ್ಕು ಕಸಿಯಲು ಮುಂದಾದರೆ ಸುಮ್ಮನಿರಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಎಲ್ಲ ನಗರ, ಪಟ್ಟಣಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ರಿಯಾಝ್ ಕಡಂಬು ಹೇಳಿದರು.

ಎಸ್‌ಡಿಪಿಐ ಚುನಾವಣಾ ಆಯೋಗದಲ್ಲಿ ನೋಂದಣಿಯಾದ ರಾಜಕೀಯ ಪಕ್ಷ. ಇದೇ ರೀತಿ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಲು ಮುಂದಾದರೆ, ಪ್ರತಿಭಟನೆ ತಡೆಯಲು ಮುಂದಾದರೆ ಕಾನೂನಾತ್ಮಕವಾಗಿ ಎದುರಿಸುವುದು ಮಾತ್ರವಲ್ಲದೆ, ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್, ಜಿಲ್ಲಾ ಕಾರ್ಯದರ್ಶಿ ಅಕ್ಬರ್, ಮೂಡಬಿದ್ರೆ ಕ್ಷೇತ್ರದ ಆಸಿಫ್ ಕೋಟೆಬಾಗಿಲು ಉಪಸ್ಥಿತರಿದ್ದರು.