ಮತ್ತೊಂದು ಅಪರೂ‍ಪದ ಕಡಲಾಮೆ ಕಳೇಬರ ಪತ್ತೆ

ಮತ್ತೊಂದು ಅಪರೂ‍ಪದ ಕಡಲಾಮೆ ಕಳೇಬರ ಪತ್ತೆ

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಪರೂ‍ಪದ ಹಸಿರು ಕಡಲಾಮೆಯ ಮೃತದೇಹವೊಂದು ಗುರುವಾರ ಪತ್ತೆಯಾಗಿದೆ. ಕಾರವಾರ ಸುತ್ತಮುತ್ತ ಒಂದು ತಿಂಗಳ ಅವಧಿಯಲ್ಲಿ ಪತ್ತೆಯಾದ ಆಮೆಯ ನಾಲ್ಕನೇ ಕಳೇಬರ ಇದಾಗಿದೆ.

ಹೆಣ್ಣು ಆಮೆ ಆಗಿದ್ದು, ಮೀನುಗಾರಿಕೆಯ ಬಲೆಗೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಸಂತ ರೆಡ್ಡಿ ಅವರ ಮಾರ್ಗದರ್ಶನದಂತೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್, 'ಹಸಿರು ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಕ್ರಮ 1ರ ಅಡಿಯಲ್ಲಿ ಅಳಿವಿನ ಅಂಚಿನಲ್ಲಿರುವ ಜೀವಿ ಎಂದು ಗುರುತಿಸಲಾಗಿದೆ. ಅವು ಈ ಭಾಗದಲ್ಲಿ ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುತ್ತವೆ. ಗರಿಷ್ಠ ಜೀವಿತಾವಧಿಯಲ್ಲಿ 100 ವರ್ಷಕ್ಕೂ ಅಧಿಕ ಬದುಕುತ್ತವೆ. ಒಂದು ಮೀಟರ್‌ಗೂ ಅಧಿಕ ಸುತ್ತಳತೆಯಲ್ಲಿ ಬೆಳೆಯುತ್ತವೆ. ಇದು ಸಣ್ಣದಾಗಿದ್ದು, ವಯಸ್ಸು ಮತ್ತಿತರ ಮಾಹಿತಿಗಳು ಮರಣೋತ್ತರ ಪರೀಕ್ಷೆಯ ವರದಿಯಿಂದ ಗೊತ್ತಾಗಲಿದೆ' ಎಂದು ಹೇಳಿದರು.