ಮಾ.9ರಂದು ಕಾಂಗ್ರೆಸ್‌ ಬಂದ್‌ ಕರೆಗೆ ಸಿಎಂ ಬೊಮ್ಮಾಯಿ ಕೆಂಡಾಮಂಡಲ

ಮಾ.9ರಂದು ಕಾಂಗ್ರೆಸ್‌ ಬಂದ್‌ ಕರೆಗೆ ಸಿಎಂ ಬೊಮ್ಮಾಯಿ ಕೆಂಡಾಮಂಡಲ

ಹುಬ್ಬಳ್ಳಿ: ಮಾರ್ಚ್​ 9ರಂದು ಕಾಂಗ್ರೆಸ್‌ ಬಂದ್ ಕರೆ ನೀಡಿರುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದಲ್ಲೇ ಕಾಂಗ್ರೆಸ್‌ ಸಂಪೂರ್ಣ ಬಂದ್‌ ಆಗುತ್ತಿದೆ. ಅವರು ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದೆ.

ಆದರೆ ಜನರು ಮಾತ್ರ ಇವರು ಹೇಗೆ ಅಂತಾ ನೋಡಿದ್ದಾರೆ. ಯಾರೂ ಸತ್ಯ ಹರಿಶ್ಚಂದ್ರ ಅನ್ನೋದು ಜನರಿಗೆ ಗೊತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ಬಂದ್‌ ಗೆ ಜನರು ಬೆಂಬಲ ನೀಡುವುದಿಲ್ಲ.ಆಪಾದನೆ ಮಾಡುವವರು ಮೊದಲು ಶುದ್ಧರಿರಬೇಕು. ಆವಾಗ ಅದಕ್ಕೆ ಬೆಲೆ ಬರುತ್ತದೆ. ಕಾಂಗ್ರೆಸ್​ನವರು ದಿಂಬು, ಹಾಸಿಗೆ, ಬಿಸ್ಕೇಟ್ ಮತ್ತು ಕಾಫಿಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ, ಕಾಂಗ್ರೆಸ್ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಕೆ ಜೆ ಜಾರ್ಜ್, ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪಗೆ ಕೇಳಬೇಕು ವಿಪಕ್ಷ ನಾಯಕ ಸಿದ್ಧರಾಮಯ್ಯ ಎಷ್ಟೆಲ್ಲ ಟಾರ್ಗೆಟ್‌ ಕೊಟ್ಟಿದ್ದರು ಎಂದು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯಲ್ಲ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.

ಬೆಳಗಾವಿಯಲ್ಲಿ ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ