ಆಟೋ ಚಾಲಕನ ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜಿಸಿದ ವೈದ್ಯರು: ಮೃಗೀಯ ವೈದ್ಯನ ಅರೆಸ್ಟ್!
ಕುಡಿದ ಸೋಗಿನಲ್ಲಿ ಆಟೊ ಚಾಲಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದೂ ಅಲ್ಲದೇ ಚಾಲಕನ ಮೇಲೆ ಮೂತ್ರ ವಿಸರ್ಜಿಸಿ ವೈದ್ಯರ ತಂಡವೊಂದು ಅಮಾನವೀಯವಾಗಿ ನಡೆದುಕೊಂಡ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ಖಾಸಗಿ ಆಸ್ಪತ್ರೆಯ ವೈದ್ಯನನ್ನು ಬಂಧಿಸಲಾಗಿದೆ.
ಯಲಹಂಕ ನಿವಾಸಿ 26 ವರ್ಷದ ಆಟೊ ಚಾಲಕ ಮುರಳಿ ಹಲ್ಲೆಗೊಳಗಾಗಿದ್ದು, ಖಾಸಗಿ ಆಸ್ಪತ್ರೆ ವೈದ್ಯ ರಾಕೇಶ್ ಶೆಟ್ಟಿಯನ್ನು ಬಂಧಿಸಲಾಗಿದೆ.
ನವೆಂಬರ್ 4ರಂದು ರಾತ್ರಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ಮುಂದೆ ಕೂಗಾಟ ನಡೆಸಿದ 6ರಿಂದ 7 ಮಂದಿ ವೈದ್ಯರು ರೌಡಿಯಂತೆ ವರ್ತಿಸಿ ವೈದ್ಯ ಸಮೂಹ ತಲೆತಗ್ಗಿಸುವಂತೆ ಮಾಡಿದ್ದಾರೆ.
ಚಾಲಕ ಮುರಳಿಗೆ ಹಲ್ಲೆ ನಡೆಸಿದ ವೈದ್ಯರಲ್ಲೊಬ್ಬರು ಪರಿಚಯ ಇದ್ದು, ಅಡುಗೆ ತಲುಪಿಸಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮತ್ತೊಬ್ಬ ವೈದ್ಯ ಡ್ರಾಪ್ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ವೈದ್ಯರ ಗುಂಪು ಚಾಲಕ ಕುಡಿದಿದ್ದಿಯಾ ಅಂತ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದೂ ಅಲ್ಲದೇ ಶೌಚಾಲಯಜಕ್ಕೆ ಕರೆದೊಯ್ದು ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಮೃಗೀಯವಾಗಿ ನಡೆದುಕೊಂಡಿದ್ದಾರೆ. ದುರಂತ ಅಂದರೆ ರೋಗಿಗಳ ಸಮ್ಮುಖದಲ್ಲೇ ಪೈಶಾಚಿಕ ಕೃತ್ಯ ಮೆರೆದಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಹಲ್ಲೆ ಸಂಬಂಧ ಚಾಲಕ ನೀಡಿದ ದೂರಿನ ಮೇರೆಗೆ ರಾಕೇಶ್ ಶೆಟ್ಟಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.