ರಾಜಕೀಯ ಡೊಂಬರಾಟಕ್ಕೆಲ್ಲ ಮಾಜಿ ಸಚಿವ ರೇವಣ್ಣ ಅವರೇ ಕಾರಣ: ಎ.ಟಿ.ರಾಮಸ್ವಾಮಿ ವಾಗ್ದಾಳಿ

ಹಾಸನ: ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಡೊಂಬರಾಟಕ್ಕೆಲ್ಲ ಮಾಜಿ ಸಚಿವ ರೇವಣ್ಣ ಅವರೇ ಕಾರಣ. ಕೆಲವರು ತಮ್ಮ ಸ್ವಾರ್ಥಕ್ಕೆ ಯಾರನ್ನಾದರೂ ಬಲಿ ಕೊಡುತ್ತಾರೆ, ಅವರನ್ನ ನಂಬಬೇಡಿ ಎನ್ನುವ ಮೂಲಕ ಪರೋಕ್ಷವಾಗಿ ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಳಿವಯಸ್ಸಿನಲ್ಲೂ ಸೋಲುವಂತೆ ಮಾಡಿದ್ದು ನೋವಿನ ವಿಷಯ. ಅವರನ್ನೇ ಹೊರ ಹಾಕಿದವರಿಗೆ ನಾವು ಯಾವ ಲೆಕ್ಕ, ದೇವೇಗೌಡರ ತಪಸ್ಸು, ಜಪ ಹಾಗೂ ಅವರ ಹೆಸರಿನಿಂದ ಮೇಲೆ ಬಂದ ನಂತರ ಏಣಿ ಒದ್ದರು, ಇಳಿವಯಸ್ಸಿನಲ್ಲೂ ನೋವು ಕೊಟ್ಟರು. ಹಿರಿಯ ಜೀವ ಈಗ ನೋವಿನಿಂದ ನರಳುತ್ತಿದೆ ಎಂದು ಮರುಗಿದರು.
ಏನೇನು ನಡೆಯುತ್ತಿದೆ, ಡೊಂಬರಾಟ, ರಾಜಕೀಯ ಬಿಕ್ಕಟ್ಟಿಗೆ ಹೊರಗಿನವರು ಕಾರಣಾನಾ ಎಂದು ಪ್ರಶ್ನಿಸಿದ ಅವರು, ಇದಕ್ಕೆಲ್ಲ ರೇವಣ್ಣನ ಮನೆಯವರೇ ಕಾರಣ ಎಂದು ನೇರ ಆರೋಪ ಮಾಡಿದರು. ರಾಮಸ್ವಾಮಿಯವರೇ ನೀವು ಪ್ರಾಮಾಣಿಕರು, ದೇವೇಗೌಡರಿಗೆ ಸಮಾನರಾದವರು, ನೀವು ರಾಜಕೀಯದಲ್ಲಿ ಇರಬೇಕು, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ನಿಮ್ಮನ್ನು ಮಂತ್ರಿ ಮಾಡಲಾಗುವುದು ಎಂದೆಲ್ಲ ಹೇಳಿ, ಈಗ ಅವಹೇಳನ ಮಾಡಿ ಹೊರ ಓಡಿಸಿದ್ರಲ್ಲ ಎಂದರು.