ಲೋಕಸಭೆಯಲ್ಲೂ ಗದ್ದಲ ಎಬ್ಬಿಸಿದ ರಮೇಶ್ ಕುಮಾರ್ ಹೇಳಿಕೆ

ಲೋಕಸಭೆಯಲ್ಲೂ ಗದ್ದಲ ಎಬ್ಬಿಸಿದ ರಮೇಶ್ ಕುಮಾರ್ ಹೇಳಿಕೆ

ನವದೆಹಲಿ, ಡಿಸೆಂಬರ್ 17: ಅತ್ಯಾಚಾರ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯು ಲೋಕಸಭೆಯಲ್ಲೂ ಗದ್ದಲ ಸೃಷ್ಟಿಸಿದೆ.

ಸ್ಮೃತಿ ಇರಾನಿ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, '' ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಅವರು ನೀಡಿರುವ ಹೇಳಿಕೆ ನಾಚಿಕೆಗೇಡಿನ ವಿಷಯವಾಗಿದೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು'' ಎಂದು ಒತ್ತಾಯಿಸಿದ್ದಾರೆ.

ಅತ್ಯಾಚಾರ ತಡೆಯಲು ಸಾಧ್ಯವಾಗದಿದ್ದರೆ ಎಂಜಾಯ್ ಮಾಡಬೇಕು ಎನ್ನುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾಬಚ್ಚನ್ ಮಾತನಾಡಿ, ರಮೇಶ್ ಕುಮಾರ್ ಅವರ ಹೇಳಿಕೆ ನಾಚಿಕೆಗೇಡಿನ ವಿಷಯವಾಗಿದ್ದು, ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಇಂತಹ ಮನಸ್ಥಿತಿಗಳುಳ್ಳವರು ಇದ್ದರೆ ಸಮಾಜ ಬದಲಾಗುವುದೆಲ್ಲಿಂದ, ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

ಅತ್ಯಾಚಾರದ ಬಗ್ಗೆ ವಿವಾದಾತ್ಮಕ ನುಡಿಗಟ್ಟು ಉಲ್ಲೇಖ ಮಾಡಿದ್ದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.‌

ವಿಧಾನಸಭೆಯಲ್ಲಿ ಸದನ‌ ಆರಂಭ ಆಗುತ್ತಿದ್ದಂತೆ, ಎದ್ದು ನಿಂತ ರಮೇಶ್ ಕುಮಾರ್, ಇಂಗ್ಲಿಷ್ ಭಾಷೆಯ ಮಾತನ್ನು ಉಲ್ಲೇಖ ಮಾಡಿದೆ ಅಷ್ಟೇ.ಹೆಣ್ಣಿಗೆ ಅಪಮಾನ ಮಾಡುವುದು, ಸದನದ ಗೌರವ ಕಡಿಮೆ ಮಾಡುವುದು, ‌ಲಘುವಾಗಿ ವರ್ತಿಸುವ ಉದ್ದೇಶ ಇರಲಿಲ್ಲ ಎಂದರು.

ಮಾತನಾಡಿದ ಸಂದರ್ಭದ ಬಗ್ಗೆ ನಾನು ಸಮರ್ಥನೆ ಮಾಡಲ್ಲ. ನಾನು‌ ಉಲ್ಲೇಖ ಮಾಡಿದ ಮಾತು ಯಾರಿಗೂ ನೋವಾಗಿದ್ದರೂ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದವನು, ಸದನದ ಗೌರವದಲ್ಲಿ ನಡೆದುಕೊಳ್ಳಬೇಕು ಎಂಬ ಪ್ರಯತ್ನ ಮಾಡುತ್ತೇನೆ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ ಎಂದರು.

ತಾವು ನಗಾಡಿದ್ದೀರಿ,ತಮ್ಮನ್ನೂ ಸಹ ಅಪರಾಧಿ ಮಾಡಿದ್ದಾರೆ, ನಿಮ್ಮದೂ ಆ ಉದ್ದೇಶ ಇರಲಿಕ್ಕಿಲ್ಲ ಎಂದು ಸ್ಪೀಕರ್ ಕಾಗೇರಿಗೆ ಹೇಳಿದ ರಮೇಶ್ ಕುಮಾರ್, ನನ್ನ ಮಾತಿಂದ ಸಮಾಜದ ಯಾವ ವರ್ಗಕ್ಕೆ ನೋವಾಗಿದ್ದರೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನೋವಾದಲ್ಲಿ,ಅದಕ್ಕೆ ವಿಷಾದ ವ್ಯಕ್ತಪಡಿಸಲು ಯಾವುದೇ ಮುಜುಗರ ಇಲ್ಲ ಎಂದರು.

ಸದನದಲ್ಲಿ ಹೇಳಿದ್ದೇನು?

ಅತಿವೃಷ್ಠಿ ಹಾಗೂ ಪ್ರವಾಹ ಹಾನಿ ವಿಚಾರವಾಗಿ ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಉತ್ತರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,‌ "ಎಷ್ಟು ಬೇಕಾದರೂ ಮಾತನಾಡಲು ಅವಕಾಶ ಕೊಡುತ್ತೇನೆ, ಗಮನ‌ ಸೆಳೆಯುವ ಸೂಚನೆ ಕೈಬಿಟ್ಟುಬಿಡುತ್ತೇನೆ. ಉಳಿದಿದ್ದನ್ನು ಮುಂದುವರಿಸಿಕೊಂಡು ಹೊಗುತ್ತೇನೆ," ಎಂದರು.

ಈ ಮಾತುಕತೆಯ ವೇಳೆ ಎದ್ದು ನಿಂತು ಮಾತನಾಡಿದ ರಮೇಶ್ ಕುಮಾರ್ ಇಂಗ್ಲಿಷ್ ನುಡಿಗಟ್ಟನ್ನು ಉಲ್ಲೇಖಿಸಿ ವೆನ್‌ ರೇಪ್‌ ಈಸ್‌ ಇನ್‌ಎವಿಟೇಬಲ್‌ (That is exactly the position into which you are) ಎಂದಿದ್ದರು.

ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದರು. ಈ ಹೇಳಿಕೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕರು.

ಸದನದಲ್ಲಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಹೇಳಿಕೆ ಸಹಜ ವಿದ್ಯಮಾನ ಎನ್ನುವಂತೆ ವರ್ತಿಸಿದರು. ರಮೇಶ್ ಕುಮಾರ್ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು.

ರಮೇಶ್‌ ಕುಮಾರ್ ಕ್ಷಮೆ:

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ರಮೇಶ್ ಕುಮಾರ್, ಅತ್ಯಾಚಾರ ಕುರಿತು ವಿಧಾನಸಭೆಯಲ್ಲಿ ನಾನು ಆಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಮಾತುಗಳಿಗೆ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ಉದ್ದೇಶಪೂರ್ವಕವಾದ ಹೇಳಿಕೆ ಆಗಿರಲಿಲ್ಲ ಮತ್ತು ಘೋರ ಅಪರಾಧವನ್ನು ಅಲಕ್ಷಿಸದಿರುವುದು ಆಗಿರಲಿಲ್ಲ. ಮುಂದೆ ಈ ರೀತಿ ಪದ ಬಳಸದಂತೆ ಎಚ್ಚರಿಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

'ದೆರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇಡೌನ್‌ ಅಂಡ್‌ ಎಂಜಾಯ್‌' (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಬೇಕಿದ್ದ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಸಹ ನಕ್ಕಿದ್ದು, ಚರ್ಚೆಗೆ ಗ್ರಾಸವಾಗಿತ್ತು.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಹಿಳಾ ಶಾಸಕಿಯರು, ಈ ರೀತಿಯ ಹೇಳಿಕೆ ಖಂಡನೀಯ. ಈ ಮಾತುಗಳನ್ನು ಹಿಸ್ಟರಿಯಿಂದ ತೆಗೆದು ಹಾಕುವಂತೆ ಹೇಳಲಾಗುವುದು. ಶಾಸಕರು ಸಹ ಸದನದಲ್ಲಿಯೇ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿರುವಂತಹ ಹಿರಿಯ ಶಾಸಕರು ಈ ರೀತಿಯ ಮಾತುಗಳನ್ನಾಡುವುದು ಎಷ್ಟು ಸರಿ? ಸದನದ ಗೌರವವನ್ನು ಕಡಿಮೆ ಮಾಡುವ ಮಾತುಗಳನ್ನು ಬಳಸಬಾರದು. ಕ್ಷಮೆಯಿಂದ ಆಡಿದ ಮಾತುಗಳು ಮರೆಯಾಗಲ್ಲ ಎಂದು ಮಹಿಳಾ ಸಂಘಟನೆಗಳು ಅಸಮಾಧಾನ ಹೊರ ಹಾಕಿವೆ.