ಜೋಡೋ ಅಲ್ಲ, ರಾಹುಲ್ ರೀ-ಲಾಂಚಿಂಗ್ ಯಾತ್ರೆ: ಸಿಎಂ ಬೊಮ್ಮಾಯಿ ವ್ಯಂಗ್ಯ

ಜೋಡೋ ಅಲ್ಲ, ರಾಹುಲ್ ರೀ-ಲಾಂಚಿಂಗ್ ಯಾತ್ರೆ: ಸಿಎಂ ಬೊಮ್ಮಾಯಿ ವ್ಯಂಗ್ಯ

ರಾಯಚೂರು: ಕಾಂಗ್ರೆಸ್​ನವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಜನರಿಗಾಗಿ ಅಲ್ಲ. ವರ್ಚಸ್ಸು ಕಳೆದುಕೊಂಡಿರುವ ರಾಹುಲ್ ಗಾಂಧಿಯ ರೀ-ಲಾಂಚಿಂಗ್ ಯಾತ್ರೆಯಾಗಿದೆ. ಸಣ್ಣ ಹುಡುಗ ಹೇಳಿದಂತೆ ರಾಜ್ಯದ ಹಿರಿಯ ನಾಯಕರು ಕುಣಿಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.\

ತಾಲೂಕಿನ ಗಿಲ್ಲೆಸುಗೂರು ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ರಾಜಕಾರಣದಲ್ಲಿ ರಾಹುಲ್ ಅವರನ್ನು ಪ್ರಸ್ತುತವಾಗಿರಿಸುವಂತೆ ಮಾಡಲು ಯಾತ್ರೆ ಮೂಲಕ ಪ್ರಯತ್ನಿಸಲಾಗಿದೆ ಎಂದರು. ಅಹಿಂದ ಹೆಸರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆದರೆ ಅಧಿಕಾರಕ್ಕೆ ಬಂದ ನಂತರ ಸಮಾಜವಾದ ಮರೆತರು. ಈಗವರ ಹಿಂದೆ ಇರುವುದು ಕೇವಲ ಅಲ್ಪಸಂಖ್ಯಾತರು ಮಾತ್ರ. ಭಾಗ್ಯಗಳ ಹೆಸರಿನಲ್ಲಿ ಜನರಿಗೆ ದೌರ್ಭಾಗ್ಯ ನೀಡಿದ ಸಿದ್ದರಾಮಯ್ಯ, ಈಗ ಎಸ್ಸಿ-ಎಸ್ಟಿ ಮೀಸಲು ಹೆಚ್ಚಳದಿಂದ ಕಳವಳಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗಾಗಿದ್ದು, ಸ್ಪಲ್ಪ ದಿನಗಳಲ್ಲಿ ಅದರಲ್ಲಿದ್ದವರು ಹೊರಗೆ ಜಿಗಿಯುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯ ಕಾಲಿನ ಬಳಿ ಕೂಡಲೂ ಯೋಗ್ಯತೆಯಿಲ್ಲದ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಪ್ರಧಾನಿ ಬಗ್ಗೆ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ. ಮತ್ತೊಮ್ಮೆ ಸಿಎಂ ಆಗುವ ಸಿದ್ದರಾಮಯ್ಯ ಕನಸು ಈಡೇರುವುದಿಲ್ಲ ಎಂದರು.

ಗಾಂಧಿ ಕುಟುಂಬದ ಕೃಪೆಯಿಂದ ಕಾಂಗ್ರೆಸ್​ನ ರಮೇಶಕುಮಾರ ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದು, ಅವರ ಋಣ ತೀರಿಸಬೇಕು ಎಂದು ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 12 ಲಕ್ಷ ಕೋಟಿ ರೂ. ಹಗರಣ ನಡೆದಿದ್ದು, ಅದರಲ್ಲಿ ಗಾಂಧಿ ಕುಟುಂಬದ ಪಾಲು ಎಷ್ಟೆಂದು ಜನರಿಗೆ ತಿಳಿಸಬೇಕು. 75 ಲಕ್ಷ ರೂ. ಮೌಲ್ಯದ ವಾಚ್ ಯಾರು ಕೊಟ್ಟರು ಎಂದು ಸಿದ್ದರಾಮಯ್ಯ ಹೇಳಬೇಕು ಎಂದು ಹೇಳಿದರು.

ಎಸ್ಟಿ ಮತ ಸೆಳೆಯಲು ಮುನ್ನುಡಿ: ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿರಿಸಿ ಜನಸಂಕಲ್ಪ ಯಾತ್ರೆ ಆರಂಭಿಸಿರುವ ಬಿಜೆಪಿ ನಾಯಕರು, ಈ ಮೂಲಕ ಎಸ್ಸಿ-ಎಸ್ಟಿ ಮೀಸಲು ಹೆಚ್ಚಳವನ್ನು ಟ್ರಂಪ್ ಕಾರ್ಡ್ ಆಗಿ ಬಳಸಲು ಮುಂದಾಗಿದೆ. ಗಿಲ್ಲೆಸುಗೂರಿನಿಂದ ಮಂಗಳವಾರ ಆರಂಭವಾದ ಜನಸಂಕಲ್ಪ ಯಾತ್ರೆಯಲ್ಲಿ ಇದು ಸ್ಪಷ್ಟವಾಗಿ ಕಂಡು ಬರುತ್ತಿತ್ತು. ಮೀಸಲು ಹೆಚ್ಚಳದ ವಿಷಯವನ್ನಿಟ್ಟುಕೊಂಡು ಎಸ್ಟಿ ಸಮುದಾಯದ ಜನರನ್ನು ಸೆಳೆವ ನಿಟ್ಟಿನಲ್ಲಿ ಯಾತ್ರೆಯನ್ನು ಸಮುದಾಯದವರು ಹೆಚ್ಚಿರುವ ಹಾಗೂ ಎಸ್ಟಿಗೆ ಮೀಸಲಾದ ರಾಯಚೂರು ಗ್ರಾಮೀಣ ಕ್ಷೇತ್ರದ ಗಿಲ್ಲೆಸುಗೂರು ಗ್ರಾಮದಿಂದ ಯಾತ್ರೆ ಆರಂಭಿಸಲಾಗಿದೆ. ಸಮಾವೇಶದಲ್ಲೂ ಮಾತನಾಡಿದ ಎಲ್ಲ ನಾಯಕರು ಮೀಸಲು ಹೆಚ್ಚಳ ಮಾಡಿದ ಸಿಎಂ ಬೊಮ್ಮಾಯಿಯನ್ನು ಆಧುನಿಕ ಅಂಬೇಡ್ಕರ್ ಎನ್ನುವ ಮೂಲಕ ಹಿಂದಿನ ಯಾವ ಸರ್ಕಾರಗಳು ಮಾಡದ ಕೆಲಸವನ್ನು ಬಿಜೆಪಿ ಮಾಡಿದ್ದು, ಸಮುದಾಯದ ಜನರು ಪಕ್ಷಕ್ಕೆ ಋಣಿವಾಗಿರಬೇಕು ಎನ್ನುವ ಸಂದೇಶ ನೀಡಿದರು. ಜಿಲ್ಲೆಯ ಏಳು ಕ್ಷೇತ್ರದಲ್ಲಿ ನಾಲ್ಕು ಎಸ್ಟಿಗೆ ಹಾಗೂ ಒಂದು ಕ್ಷೇತ್ರ ಎಸ್ಸಿಗೆ ಮೀಸಲಾಗಿದ್ದನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಯಚೂರು ಜಿಲ್ಲೆಯಿಂದಲೇ ಜನಸಂಕಲ್ಪ ಯಾತ್ರೆ ಆರಂಭಿಸಲು ಪಕ್ಷದ ನಾಯಕರು ನಿರ್ಧರಿಸಿದ್ದರು.

ಭೋಜನ ಬದಲು ಚಹಾ: ಬೊಮ್ಮಾಯಿ, ಯಡಿಯೂರಪ್ಪ ಮತ್ತು ಗಣ್ಯರಿಗೆ ಸಮಾವೇಶದ ನಂತರ ದಲಿತರ ಮನೆಯಲ್ಲಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಕುಟುಂಬದವರು ಮತ್ತೊಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಅಲ್ಲಿ ಭೋಜನ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದಾಗಿ ಸಿಎಂ, ಬಿಎಸ್​ವೈ ಮತ್ತಿತರರು ಸಮಾವೇಶ ಮುಗಿದ ನಂತರ ರಾಯರ ವೃಂದಾವನ ದರ್ಶನಕ್ಕೆ ತೆರಳಿ, ಅಲ್ಲಿಯೇ ಪ್ರಸಾದ ಸ್ವೀಕರಿಸಿದರು. ಹೆಲಿಕಾಪ್ಟರ್ ಗಿಲ್ಲೆಸು ಗೂರಿನಲ್ಲಿದ್ದ ಕಾರಣ ಮಂತ್ರಾಲಯ ದಿಂದ ವಾಪಸ್ ಬಂದು ಭೋಜನದ ವ್ಯವಸ್ಥೆ ಮಾಡಲಾಗಿದ್ದ ದಲಿತರ ಮನೆಗೇ ತೆರಳಿ ಚಹಾ ಸೇವಿಸಿದರು.

ಮೀಸಲು ಬೇಡಿಕೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಹೆಚ್ಚಿಸಿದ ಬಳಿಕ ವಿವಿಧ ಸಮುದಾಯಗಳು ಮೀಸಲು ಪ್ರಮಾಣ ಹೆಚ್ಚಬೇಕು ಎಂಬ ಆಕಾಂಕ್ಷೆ ಹೊಂದಿರುವುದು ಸಹಜ. ಈ ಬೇಡಿಕೆಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಸಿಎಂ ಅಧಿಕೃತ ನಿವಾಸ 'ರೇಸ್ ವ್ಯೂ' ಕಾಟೇಜ್ ಬಳಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಅಂಗೀಕರಿಸಿ, ಎಸ್​ಸಿ, ಎಸ್​ಟಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪ್ರಮಾಣ ಏರಿಕೆಗೆ ತೀರ್ವನಿಸಲಾಗಿದೆ. ಅದೇ ರೀತಿ ಹಲವು ಸಮುದಾಯಗಳ ಮೀಸಲು ಏರಿಕೆ, ಎಸ್​ಸಿ ಅಥವಾ ಎಸ್​ಟಿಗೆ ಸೇರ್ಪಡೆ, ವರ್ಗ ಬದಲಾವಣೆ ಬೇಡಿಕೆಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಪರಿಶೀಲಿಸುತ್ತಿದ್ದು, ತಜ್ಞರು ಅವಲೋಕಿಸಿ ವರದಿ ಸಲ್ಲಿಸಲಿದ್ದಾರೆ. ಇತರೆ ಹಿಂದುಳಿದ ವರ್ಗಗಳ ಮೀಸಲು ಸಂರಕ್ಷಣೆಗೂ ಸರ್ಕಾರ ಬದ್ಧ ಎಂದರು.

ಮತ್ತೆ ಅಧಿಕಾರದ ವಿಶ್ವಾಸ: ಕೇಂದ್ರ, ರಾಜ್ಯ ಸರ್ಕಾರದ ಹತ್ತಾರು ಯೋಜನೆಗಳ ಲಾಭ ಪ್ರತಿ ವಿಧಾನಸಭೆ ಕ್ಷೇತ್ರದ ಸಾವಿರಾರು ಜನರಿಗೆ ಲಭಿಸಿದೆ. ಜನಪರ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು ಉತ್ತಮ ಅಭಿಪ್ರಾಯ ಮೂಡಿಸಿದ್ದು, ಸ್ವಂತ ಬಲದ ಮೇಲೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದರು.

ಬೇಡ ಜಂಗಮರ ವಿಧಾನಸೌಧ ಚಲೋ

ಬಾಗಲಕೋಟೆ: ಬೇಡ ಜಂಗಮ ಪ್ರಮಾಣಪತ್ರ ವಿತರಣೆಗೆ ಆಗ್ರಹಿಸಿ ಬೇಡ ಜಂಗಮ ಸಮಾಜದವರು ಅ.18ರಂದು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದಾರೆ. ಆತ್ಮ ಅರ್ಪಣೆ ಹೆಸರಿನಲ್ಲಿ ಇದು ಮಾಡು ಇಲ್ಲವೆ ಮಡಿ ಹೋರಾಟ ಎಂದು ಕೋಟೆಕಲ್ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ನಾವು ಯಾರ ಮೀಸಲಾತಿಯನ್ನೂ ಕಸಿದುಕೊಳ್ಳುತ್ತಿಲ್ಲ. ನಮ್ಮ ಪಾಲಿನ ಹಕ್ಕು ಕೇಳುತ್ತಿದ್ದೇವೆ. ಕೆಲ ಶಾಸಕರ ಪಟ್ಟಭದ್ರ ಹಿತಾಸಕ್ತಿಯಿಂದಾಗಿ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.