ರಾಜ್ಯಸಭೆಯಲ್ಲಿ ಕೊನೇ ಸಾಲಿನ ಆಸನಕ್ಕೆ ಸ್ಥಳಾಂತರಗೊಂಡ ಮನಮೋಹನ್ ಸಿಂಗ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ರಾಜ್ಯಸಭೆಯ ಮುಂದಿನ ಸಾಲಿನ ಆಸನದಿಂದ ಕೊನೆಯ ಸಾಲಿನ ಆಸನಕ್ಕೆ ಸ್ಥಳಾಂತರಗೊಳಿಸಲಾಗಿದೆ. ಮನಮೋಹನ ಸಿಂಗ್ (90) ಅವರ ಗಾಲಿಕುರ್ಚಿಯ ಚಲನೆಗೆ ಅನುಕೂಲವಾಗಲೆಂದು ಈ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಗುರುವಾರ ತಿಳಿಸಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ, ದಿಗ್ವಿಜಯ ಸಿಂಗ್ ಅವರು ಆಸನ ಹಂಚಿಕೆಯ ನಂತರ ಮುಂದಿನ ಸಾಲಿನಲ್ಲಿ ಆಸನ ಪಡೆದಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಮೊದಲಿನ ಸ್ಥಾನದಲ್ಲಿ ಆಸೀನರಾಗಲಿದ್ದಾರೆ ಎನ್ನಲಾಗಿದೆ.