'ಆತ ಒಬ್ಬ ಕ್ರಿಮಿನಲ್' - ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ವಿಪಕ್ಷಗಳ ಪಟ್ಟು

'ಆತ ಒಬ್ಬ ಕ್ರಿಮಿನಲ್' - ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಗುರುವಾರ ಲೋಕಸಭೆಯಲ್ಲಿ ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಆತ ಒಬ್ಬ ಕ್ರಿಮಿನಲ್' ಎಂದು ವಾಗ್ದಾಳಿ ಮಾಡಿದ್ದಾರೆ.  ಅಕ್ಟೋಬರ್ 3ರಂದು ನಡೆದ ಲಖೀಂಪುರ-ಖೇರಿ ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಮೃತಪಟ್ಟಿದ್ದರು. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ಲೋಕಸಭೆಯಲ್ಲಿ ಗುರುವಾರ ಭಾರಿ ಗದ್ದಲ ನಡೆಯಿತು. ಸಚಿವರ ರಾಜೀನಾಮೆಗಾಗಿ ಘೋಷಣೆ ಕೂಗಿದರು.

ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಬೇಕು. ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು. 'ಆತ ಒಬ್ಬ ಕ್ರಿಮಿನಲ್' ಎಂದು ಸದನದಲ್ಲಿ ಗದ್ದಲದ ನಡುವೆ ರಾಹುಲ್ ಗಾಂಧಿ ಹೇಳಿದ್ದಾರೆ.

ಲಖೀಂಪುರ ಖೇರಿ ಪ್ರಕರಣವು ಪೂರ್ವಯೋಜಿತ ಷಡ್ಯಂತ್ರ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಇಟಿ) ದೋಷಾರೋಪಪಟ್ಟಿ ದಾಖಲಿಸಿದೆ. ಈ ನಡುವೆ ಪತ್ರಕರ್ತರ ವಿರುದ್ಧ ಅಮಿತ್ ಮಿಶ್ರಾ ಅತಿರೇಕವಾಗಿ ವರ್ತಿಸಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಇದರಿಂದಾಗಿ ಆಡಳಿತರೂಢ ಬಿಜೆಪಿ ಪಕ್ಷವು ಇಕ್ಕಟ್ಟಿಗೆ ಸಿಲುಕಿದೆ. ಉಭಯ ಸದನಗಳಲ್ಲಿ ಗದ್ದಲ ನಡುವೆ ಕಲಾಪವನ್ನು 2 ಗಂಟೆಯವರೆಗೆ ಮುಂದೂಡಲಾಗಿದೆ.