ಶೌರ್ಯ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ: ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಘೋಷಣೆ

ಶೌರ್ಯ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ: ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಸಿಎಂ ಘೋಷಣೆ

ಬೆಳಗಾವಿ: ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು 5 ಪಟ್ಟು ಹೆಚ್ಚಿಸಿ ಬೆಳಗಾವಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ನಗದು ಅನುದಾನದ ಮೊತ್ತದ ಬಗ್ಗೆ ಪರಿಷ್ಕರಣೆ ನಡೆಸಿದ ಸರ್ಕಾರ ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನವನ್ನು ಇದೀಗ ಐದು ಪಟ್ಟು ಹೆಚ್ಚಿಸಿದೆ.

ಪರಮವೀರ ಚಕ್ರ 25 ಲಕ್ಷದಿಂದ 1.5 ಕೋಟಿ ರೂ. ಗೆ ಹೆಚ್ಚಳ ಮಾಡಲಾಗಿದೆ.

ಮಹಾವೀರ ಚಕ್ರ 12 ಲಕ್ಷದಿಂದ 1 ಕೋಟಿ‌ ರೂಪಾಯಿ, ಅಶೋಕ ಚಕ್ರ 25 ಲಕ್ಷದಿಂದ 1.5 ಕೋಟಿ ರೂಪಾಯಿ, ಕೀರ್ತಿ ಚಕ್ರ 12 ಲಕ್ಷದಿಂದ 1 ಕೋಟಿ ರೂಪಾಯಿ, ವೀರ ಚಕ್ರ 8 ಲಕ್ಷದಿಂದ 50 ಲಕ್ಷ ರೂಪಾಯಿ, ಶೌರ್ಯ ಚಕ್ರ 8 ಲಕ್ಷದಿಂದ 50 ಲಕ್ಷ ರೂಪಾಯಿ, ಸೇನಾ ಮೆಡಲ್‌ 2 ಲಕ್ಷದಿಂದ 15 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಸಿಎಂ ಆದೇಶಿದ್ದಾರೆ.

ಪ್ರಶಸ್ತಿ ವಿಜೇತರಿಗೆ ಸುಮಾರು ಐದು ಪಟ್ಟು ಅನುದಾನವನ್ನು ಹೆಚ್ವಿಸಲಾಗಿದೆ. ಅವರ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಿ ಆದೇಶವನ್ನು ಹೊರಡಿಸಿದೆ. ಇದು ಸೇನೆಗೆ ನಾವು ಸಲ್ಲಿಸುವ ಗೌರವ. ನಿವೃತ್ತರಾದ ಮೇಲೆ ಉತ್ತಮ ಜೀವನ ನಡೆಸಲು ಹಾಗೂ ಸಾವನ್ನಪ್ಪಿದಾಗ ಸಹಾಯ ಮಾಡುತ್ತಾ ಬಂದಿದ್ದೇವೆ. ಪ್ರಶಸ್ತಿ ಪಡೆದಾಗಲು ಅವರನ್ನು ಗೌರವಿಸುವ ನಿಟ್ಟಿನಲ್ಲಿ ಅನುದಾನವನ್ನು ಹೆಚ್ವಿಸಲಾಗಿದೆ ಎಂದರು.

ದೇಶದ ತಾಂತ್ರಿಕ ಅಭಿವೃದ್ಧಿಗೆ ಸೇನಾಪಡೆಗಳ ಕೊಡುಗೆ: ಸೇನಾಪಡೆಗಳು ದೇಶದ ರಕ್ಷಣೆ ಮಾತ್ರವಲ್ಲದೆ ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ದೇಶದ ತಾಂತ್ರಿಕ ಬೆಳವಣಿಗೆಯಲ್ಲಿಯೂ ಸೇನಾಪಡೆಗಳು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ಸೇನೆಯ ಬಗ್ಗೆ ನಮಗೆ ಅತ್ಯಂತ ಹೆಮ್ಮೆ ಇದೆ. ಪ್ರತಿ ಬಾರಿಯೂ ಗಡಿಯುದ್ದಕ್ಕೂ ಅವರು ಸವಾಲುಗಳನ್ನು ಎದುರಿಸುತ್ತಾರೆ ಪೂರ್ವ , ಪಶ್ಚಿಮ, ಉತ್ತರ ಗಡಿಗಳಾಗಲಿ, ಅವರಿಗೆ ಎದುರಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಶತ್ರುಪಡೆಗಳನ್ನು ಸೋಲಿಸಿದ್ದಾರೆ. ವಿಶೇಷವಾಗಿ 1971 ರಲ್ಲಿ ನಡೆದ ಇಂಡೋ- ಪಾಕಿಸ್ತಾನ ಯುದ್ಧವು ನಮ್ಮ ಸೇನಾಪಡೆಯ ಶಕ್ತಿ, ಬುದ್ದಿವಂತಿಕೆ, ಶೌರ್ಯ ಹಾಗೂ ಮೂರು ರಕ್ಷಣಾ ಪಡೆಗಳ ನಡುವಿನ ಸಮನ್ವಯಕ್ಕೆ ಸಾಕ್ಷಿಯಾಗಿದೆ ಎಂದರು.

ಮಧ್ಯರಾತ್ರಿ ನಡೆದ ದಾಳಿಗೆ ವಾಯುಪಡೆ, ನೌಕಾ, ಸೇನಾ ಪಡೆಗಳು ಎಚ್ಚೆತ್ತು ಯುದ್ಧಕ್ಕೆ ಪ್ರತ್ಯುತ್ತರ ನೀಡಿತು. 13 ದಿನಗಳ ಕಾಲ ನಡೆದ ಯುದ್ಧದಲ್ಲಿ 3863 ಯೋಧರು ಸಾವಿಗೀಡಾಗಿ, 9000 ಕ್ಕೂ ಹೆಚ್ಚು ಯೋಧರು ಗಾಯಾಳುಗಳಾದರು. ಪಾಕಿಸ್ತಾನದ 90000 ಕ್ಕೂ ಹೆಚ್ವು ಸೈನಿಕರು ಶರಣಾಗಿ, ಭಾರತ ಜಯ ಗಳಿಸಿತು. ಇದು ಅತ್ಯುತ್ತಮ ಯುದ್ಧ ನಿರ್ವಹಣೆಯ ಪ್ರತೀಕ. 1971 ರಲ್ಲಿ ಭಾರತದ ಮಿಲಿಟರಿ ಶಕ್ತಿಯನ್ನು ಇಡೀ ವಿಶ್ವವೇ ತಿರುಗಿ ನೋಡುವಂತಾಯಿತು. ಯುದ್ಧದಲ್ಲಿ ಮಡಿದವರ ಶೌರ್ಯಕ್ಕೆ ಮುಖ್ಯಮಂತ್ರಿಗಳು ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.

ಮಿಲಿಟರಿಯಲ್ಲಿ ತಂತ್ರಜ್ಞಾನ ಬಳಕೆ:ಇತ್ತೀಚೆಗೆ ವಿಶ್ವದಲ್ಲಿ ತಂತ್ರಜ್ಞಾನ ಬಳಕೆ ಮಿಲಿಟರಿಯಲ್ಲಿ ಹೆಚ್ಚಾಗಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವೂ ಯಾವ ದೇಶಕ್ಕೂ ಕಡಿಮೆಯಿಲ್ಲ. ನಮ್ಮ ಪ್ರಧಾನಿಗಳೂ ಸಹ ಈ ನಿಟ್ಟಿನಲ್ಲಿ ಭಾರತವನ್ನು ಸಶಕ್ತಗೊಳಿಸಿದ್ದಾರೆ. ವಿಜಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ಸಂಗತಿಯಾಗಿದೆ. ಬಾಂಗ್ಲಾದೇಶವೂ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳಲು ಸಾಧ್ಯವಾಗಿರುವುದು ಭಾರತದ ಸೇನೆಯ ಸಹಾಯದಿಂದಾಗಿ. ನಮ್ಮನ್ನು ದೇಶದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಮುಡಿಪಾಗಿಟ್ಟುಕೊಳ್ಳಬೇಕು. ಅದುವೇ ನಾವು ಸೇನಾಪಡೆಗಳಿಗೆ ಸಲ್ಲಿಸುವ ನಿಜ ನಮನ ಎಂದರು.

ಇದೇ ಸಂದರ್ಭದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಇತ್ತೀಚೆಗೆ ಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಎಲ್ಲರಿಗೂ ಶ್ರದ್ದಾಂಜಲಿ ಸಲ್ಲಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಮೇಜರ್ ಜನರಲ್ ಜೆ.ವಿ. ಪ್ರಸಾದ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.