ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ಐ ಅರ್ಜುನ್ ಹೊರಕೇರಿ ಬಂಧನ

ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ಐ ಅರ್ಜುನ್ ಹೊರಕೇರಿ ಬಂಧನ

ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ಐ ಅರ್ಜುನ್ ಹೊರಕೇರಿ ಬಂಧನ

ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಅರ್ಜುನ್ ಹೊರಕೇರಿ ಅವರನ್ನು ಸಿಐಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆಎಂದು ವರದಿಯಾಗಿದೆ.

ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಅಮಾನತುಗೊಂಡ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಅವರನ್ನು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ನೇತೃತ್ವದ ತಂಡ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ವರದಿಯಾದಂತೆ, ಗೋಣಿಬೀಡು ಪೊಲೀಸರು ದಲಿತ ವ್ಯಕ್ತಿಯಾದ ಪುನಿತ್‌ನನ್ನು ಮೇ 10 ರಂದು ಆರೋಪಿ ಪೊಲೀಸ್ ಸಿಬ್ಬಂದಿಯಿಂದ ವಿಚಾರಣೆಗೆ ಒಳಪಡಿಸಿದ ಬೇರೆ ಪ್ರಕರಣಕ್ಕೆ ಸಂಬಂಧಿಸಿ ಕರೆದೊಯ್ದಿದ್ದರು.
ಪಿಎಸ್‌ಐ ಅರ್ಜುನ್‌ ಜಾಮೀನು ಅರ್ಜಿಯನ್ನು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜುನ್‌ ಪರವಾಗಿ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ವಾದ ಮಂಡಿಸಿದ್ದರು. ಯುವಕನ ಪರವಾಗಿ ಮೊಹಮ್ಮದ್‌ ಆಸೀಫ್‌ ಸಾದುಲ್ಲಾ, ಎಸ್‌. ಶಿವಮಣಿದನ್‌ ಹಾಗೂ ಬಸವಪ್ರಸಾದ್‌ ಕುನಾಲೆ ವಾದಿಸಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ಅರ್ಜುನ್‌ ಅವರಿಗೆ ಜಾಮೀನು ನಿರಾಕರಿಸಿತ್ತು.
ಇಷ್ಟಾದರೂ ತಲೆ ಮರೆಸಿಕೊಂಡಿದ್ದ ಅರ್ಜುನ್‌ ಅವರನ್ನು ಬಂಧಿಸದೇ ಇರುವುದಕ್ಕೆ ಜಿಲ್ಲೆಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಕೆಲವು ಸಂಘಟನೆಗಳು ಮೂಡಿಗೆರೆ ತಾಲೂಕು ಬಂದ್‌ಗೆ ಒತ್ತಾಯಿಸಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಬುಧವಾರ ಸಿಐಡಿ ಪೊಲೀಸರು ಅರ್ಜುನ್‌ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ