ತೀವ್ರ ಚಳಿಗೆ ಕಾನ್ಪುರದಲ್ಲಿ ಹೃದಯಾಘಾತದಿಂದ 98 ಮಂದಿ ಸಾವು

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಐದು ದಿನಗಳಲ್ಲಿ 98 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
98 ಸಾವುಗಳಲ್ಲಿ, 44 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 54 ರೋಗಿಗಳು ಚಿಕಿತ್ಸೆಗೆ ಮುಂಚೆಯೇ ಸಾವನ್ನಪ್ಪಿದ್ದಾರೆ.
ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ ತುರ್ತು ಮತ್ತು ಹೊರರೋಗಿ ವಿಭಾಗಕ್ಕೆ ಬಂದಿದ್ದಾರೆ. ತೀವ್ರ ಚಳಿಯಿಂದ ಬಳಲುತ್ತಿದ್ದ ಹದಿನಾಲ್ಕು ರೋಗಿಗಳು ಶನಿವಾರ ಹೃದಯಾಘಾತದಿಂದ ಮೃತಪಟ್ಟರೆ, ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ವೇಳೆ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್‌ಸ್ಟಿಟ್ಯೂಟ್‌ನಲ್ಲಿ ಎಂಟು ಜನರನ್ನು ಮೃತಪಟ್ಟಾಗಲೇ ಕರೆತರಲಾಯಿತು.
ಕಳೆದ 24 ಗಂಟೆಗಳಲ್ಲಿ ನಗರದ ಎಸ್‌ಪಿಎಸ್ ಹೃದ್ರೋಗ ಸಂಸ್ಥೆಯಲ್ಲಿ 14 ರೋಗಿಗಳು ಸಾವನ್ನಪ್ಪಿದ್ದಾರೆ. ಇನ್ನೂ, ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 604 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 54 ಹೊಸ ಮತ್ತು 27 ಹಳೆಯ ರೋಗಿಗಳು ಸೇರಿದ್ದಾರೆ.
ಹೃದ್ರೋಗ ವಿಭಾಗದ ನಿರ್ದೇಶಕ ವಿನಯ್ ಕೃಷ್ಣ ಮಾತನಾಡಿ, ಈ ವಾತಾವರಣದಲ್ಲಿ ಚಳಿಯಿಂದ ರೋಗಿಗಳನ್ನು ರಕ್ಷಿಸಬೇಕು ಎಂದಿದ್ದಾರೆ.
ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಅಧ್ಯಾಪಕರ ಪ್ರಕಾರ, 'ಈ ಶೀತ ವಾತಾವರಣದಲ್ಲಿ ಹೃದಯಾಘಾತವು ಕೇವಲ ವಯಸ್ಸಾದವರಿಗೆ ಸೀಮಿತವಾಗಿಲ್ಲ. ಹದಿಹರೆಯದವರೂ ಸಹ ಹೃದಯಾಘಾತಕ್ಕೆ ಒಳಗಾದ ಪ್ರಕರಣಗಳು ನಮ್ಮಲ್ಲಿವೆ. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ಇದನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಮನೆಯಲ್ಲೇ ಬೆಚ್ಚಗೆ ಇರಿ' ಎಂದಿದ್ದಾರೆ.