ಕಲಾಸಿಪಾಳ್ಯ ದಟ್ಟಣೆ ನೀಗಿಸುವ ಬಿಎಂಟಿಸಿ ಟರ್ಮಿನಲ್

ಕಲಾಸಿಪಾಳ್ಯ ದಟ್ಟಣೆ ನೀಗಿಸುವ ಬಿಎಂಟಿಸಿ ಟರ್ಮಿನಲ್

ಬೆಂಗಳೂರು: ಕಾಮಗಾರಿ ಆರಂಭವಾಗಿ ಆರು ವರ್ಷಗಳ ಬಳಿಕ ಕೊನೆಗೂ ಕಲಾಸಿಪಾಳ್ಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣ(ಟಿಟಿಎಂಸಿ) ಉದ್ಘಾಟನೆಗೆ ಸಜ್ಜಾಗಿದೆ. ಹಲವು ಸೌಕರ್ಯಗಳನ್ನು ಹೊಂದಿರುವ ಟಿಟಿಎಂಸಿ, ಈ ಭಾಗದ ಸಂಚಾರ ದಟ್ಟಣೆ ನಿವಾರಣೆ ಮಾಡಲಿದೆ ಎಂಬ ನಿರೀಕ್ಷೆ ಸ್ಥಳೀಯರಲ್ಲಿದೆ.

1940ರಲ್ಲಿ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮಾರ್ಗದರ್ಶನದಲ್ಲಿ ಬಸ್‌ ನಿಲ್ದಾಣ ನಿರ್ಮಾಣವಾಗಿತ್ತು. ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ನಿಲ್ದಾಣ ಇದಾಗಿತ್ತು. ಕೆ.ಆರ್.ಮಾರುಕಟ್ಟೆಗೆ ಸಮೀಪ ಇರುವುದರಿಂದ ಇದು ಈಗಲೂ ಅತ್ಯಂತ ಜನನಿಬಿಡ ಪ್ರದೇಶ. ಬಸ್ ಸೇರಿ ಬೇರೆ ವಾಹನಗಳ ನಿಲುಗಡೆಗೆ ಜಾಗವಿಲ್ಲದೆ ಇಡೀ ಕಲಾಸಿಪಾಳ್ಯ ಕಿಷ್ಕೆಂಧೆಯಂತಾಗಿದೆ.

ಈ ಜಾಗದಲ್ಲಿ ಸುಸಜ್ಜಿತ ಟಿಟಿಎಂಸಿ ನಿರ್ಮಾಣಕ್ಕೆ 2016ರ ಆಗಸ್ಟ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. 4.13 ಎಕರೆ ವಿಸ್ತೀರ್ಣದಲ್ಲಿ ₹63.17 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿತ್ತು. 'ಕೆಎಂವಿ ಪ್ರಾಜೆಕ್ಟ್ಸ್ ಲಿಮಿಟೆಡ್‌ ಸಂಸ್ಥೆಯು ಯೋಜನೆಯ ಗುತ್ತಿಗೆ ಪಡೆದಿದ್ದು, ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಮಿತಿ ನೀಡಲಾಗಿತ್ತು. ಅದರಂತೆ 2018ರ ಆಗಸ್ಟ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅನುದಾನ ಬಿಡುಗಡೆ ವಿಳಂಬದಿಂದ ಕಾಮಗಾರಿ ವಿಳಂಬವಾಯಿತು. ಬಳಿಕ 2019ರ ಡಿಸೆಂಬರ್‌ಗೆ ಎರಡನೇ ಕಾಲಮಿತಿ ನೀಡಲಾಗಿತ್ತು.

ಅನುದಾನ ಬಿಡುಗಡೆಯಾಗುವಷ್ಟರಲ್ಲಿ ಕೋವಿಡ್‌ ಲಾಕ್‌ಡೌನ್ ಜಾರಿಯಾಯಿತು. ಬಳಿಕ ಕಾರ್ಮಿಕರ ಕೊರತೆಯಿಂದಾಗಿ ಈ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಜನ ಜೀವನ ಸಹಜ ಸ್ಥಿತಿಗೆ ಬಂದ ಬಳಿಕ ಕಾಮಗಾರಿ ಆರಂಭವಾಗಿತ್ತು. ಈಗ ಅಂತಿಮ ಹಂತದ ಕಾಮಗಾಗಳೂ ಪೂರ್ಣಗೊಂಡಿವೆ ಎನ್ನುತ್ತಾರೆ ಅಧಿಕಾರಿಗಳು.

ಈ ಟಿಟಿಎಂಸಿಯಿಂದ ಬಿಎಂಟಿಸಿ ಬಸ್‌ಗಳು ಮಾತ್ರವಲ್ಲ, ಕೆಎಸ್‌ಆರ್‌ಟಿಸಿ ಬಸ್‌ಗಳೂ ಕಾರ್ಯಾಚರಣೆ ನಡೆಸಲಿವೆ. ನಿರ್ಮಾಣವಾಗಿರುವ ಕಟ್ಟಡದ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಲಿದ್ದು, ಆವರಣದೊಳಗಿನ ಹೊರಾಂಗಣದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಬಸ್‌ಗಳು ಮತ್ತು ಪ್ರಯಾಣಿಕರ ನಿಲುಗಡೆಗೆ ಪ್ರತ್ಯೇಕ ತಾಣಗಳನ್ನು ನಿರ್ಮಿಸಲಾಗಿದೆ.

ಕೆ.ಆರ್. ಮಾರುಟಕ್ಟೆ ಕಡೆಯಿಂದ ಬರುವ ಜನರು ನೇರವಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆ ತಾಣದ ಕಡೆಗೆ ಹೋಗಲು ಸುರಂಗ ಮಾರ್ಗವೊಂದನ್ನು ನಿರ್ಮಿಸಲಾಗಿದೆ. ಬಿಎಂಟಿಸಿ ಬಸ್‌ಗಳು ನಿಲ್ಲುವ ಜಾಗದಿಂದ ಮೇಲಕ್ಕೆ ಹತ್ತಲು ಅಲ್ಲಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

'ಸುಸಜ್ಜಿತವಾದ ಟಿಟಿಎಂಸಿ ನಿರ್ಮಾಣವಾಗುತ್ತಿರು- ವುದು ಖುಷಿಯ ವಿಚಾರ. ಆದರೆ, ಅದು ಸಾರ್ವಜನಿಕರ ಬಳಕೆಗೆ ಲಭ್ಯವಾಗಲು ಇಷ್ಟೊಂದು ಕಾಲಾವಕಾಶ ಬೇಕಾಯಿತು ಎಂಬುದು ಬೇಸರದ ವಿಷಯ. ಕಾಮಗಾರಿ ಪೂರ್ಣಗೊಂಡ ಬಳಿಕವೂ ಉದ್ಘಾಟನೆಗಾಗಿ ಕಾಯಲಾಗುತ್ತಿದೆ. ಆದಷ್ಟು ಬೇಗ ಸಾರ್ವಜನಿಕರ ಸೇವೆಗೆ ಸಮರ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಮುಖ್ಯಮಂತ್ರಿಯಿಂದ ಉದ್ಘಾಟನೆ?

ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೇ ಉದ್ಘಾಟನೆ ಮಾಡಿಸಲು ಅಧಿಕಾರಿಗಳು ಕಾದಿದ್ದಾರೆ.

ದಿನಾಂಕ ನಿಗದಿ ಮಾಡಲು ಮುಖ್ಯಮಂತ್ರಿ ಕಚೇರಿಗೆ ಕೋರಲಾಗಿದೆ. ಅಲ್ಲಿಂದ ಎಷ್ಟು ಬೇಗ ಪ್ರತಿಕ್ರಿಯೆ ಬರಲಿದೆಯೇ ಅಷ್ಟು ಬೇಗ ಬಸ್ ನಿಲ್ದಾಣ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ಸಂಚಾರ ದಟ್ಟಣೆ ನೀಗುವ ನಿರೀಕ್ಷೆ

ಕಲಾಸಿಪಾಳ್ಯ ಎಂದರೆ ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲೇ ಪ್ರಮುಖ ಸ್ಥಳ. ನಿರ್ಮಾಣವಾಗಿರುವ ಟರ್ಮಿನಲ್ ಸುತ್ತಮುತ್ತಲಿನ ರಸ್ತೆಗಳಲ್ಲೇ ಖಾಸಗಿ ಬಸ್‌ ಮತ್ತು ಸಾರಿಗೆ ಸಂಸ್ಥೆ ಬಸ್‌ಗಳು ನಿಲ್ಲುತ್ತಿವೆ. ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ನಿಲ್ಲಿಸಲು ಸುತ್ತಮುತ್ತ ಜಾಗವೇ ಇಲ್ಲವಾಗಿದೆ.

ಈ ನಿಲ್ದಾಣ ಸಾರ್ವಜನಿಕ ಸೇವೆಗೆ ಲಭ್ಯವಾದರೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ನಿಲ್ಲುವುದು ತಪ್ಪಲಿದೆ. ಎರಡೂ ಸಂಸ್ಥೆಗಳ ನಿಲ್ದಾಣದ ಅಧಿಕಾರಿಗಳು ರಸ್ತೆಯಲ್ಲೇ ನಿಂತು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಯಾಣಿಕರು ಕೂಡ ರಸ್ತೆಯಲ್ಲೇ ನಿಲ್ಲುತ್ತಿದ್ದಾರೆ. ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಸಮಸ್ಯೆಗೂ ಪರಿಹಾರ ದೊರಕಿದಂತೆ ಆಗಲಿದೆ ಎನ್ನುತ್ತಾರೆ ಸ್ಥಳೀಯರು. '6 ವರ್ಷಗಳಿಂದ ರೋಸಿ ಹೋಗಿದ್ದೇವೆ. ಈಗಲಾದರೂ ಸುಸಜ್ಜಿತ ಕಟ್ಟಡದ ನಿರ್ಮಾಣ ಆಗಿರುವುದು ಸಮಾಧಾನ ತಂದಿದೆ' ಎಂದು ಬಿಎಂಟಿಸಿ ಸಿಬ್ಬಂದಿ ಹೇಳುತ್ತಾರೆ.