ಆಪ್ ಸೇರಿದ್ದ ಕೆಲವೇ ಗಂಟೆಯಲ್ಲಿ ಕಾಂಗ್ರೆಸ್ ವಾಪಸ್ಸಾದ ಮುಖಂಡರು

ಆಪ್ ಸೇರಿದ್ದ ಕೆಲವೇ ಗಂಟೆಯಲ್ಲಿ ಕಾಂಗ್ರೆಸ್ ವಾಪಸ್ಸಾದ ಮುಖಂಡರು

ನವದೆಹಲಿ: ಕಾಂಗ್ರೆಸ್ ತೊರೆದು ಆಮ್ ಆದ್ಮಿಗೆ ಸೇರಿದ್ದ ಕೆಲವೇ ಗಂಟೆಗಳಲ್ಲಿ ಮೂವರು ಮುಖಂಡರು ವಾಪಸ್ ʼಕೈʼಗೆ ಸೇರ್ಪಡೆಗೊಂಡರು.
ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ, ಮುಸ್ತಫಾಬಾದ್ನ ಕೌನ್ಸಿಲರ್ಗಳಾದ ಸಬಿಲಾ ಬೇಗಂ ಮತ್ತು ಬ್ರಿಜ್ಪುರಿಯ ನಾಜಿಯಾ ಖಾತೂನ್ ಶುಕ್ರವಾರ ಮಧ್ಯಾಹ್ನ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅದಾದ ಬಳಿಕ ಶನಿವಾರ ಬೆಳಗಿನ ಜಾವ 2 ಗಂಟೆಗೆ ಮತ್ತೆ ಕಾಂಗ್ರೆಸ್ ಸೇರುತ್ತಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಅಲಿ ಮೆಹದಿ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ನಾನು ರಾಹುಲ್ ಗಾಂಧಿ ಅವರ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದ ಅವರು, ಆಪ್ಗೆ ಸೇರಿದ ತಪ್ಪಿಗೆ ಕಾಂಗ್ರೆಸ್ಗೆ, ರಾಹುಲ್ ಗಾಂಧಿಗೆ ಹಾಗೂ ಪ್ರಿಯಾಂಕ್ ಗಾಂಧಿ ಬಳಿ ಕ್ಷಮೆ ಯಾಚಿಸಿದರು. ಅಷ್ಟೇ ಅಲ್ಲದೇ ಅಲಿ ಮೆಹದಿ ಕೈಮುಗಿದು ಕ್ಷಮೆಯಾಚಿಸಿದ್ದಾರೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ತಂದೆ 40 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿತ್ತು. 250 ಸ್ಥಾನಗಳಲ್ಲಿ ಕೇವಲ 9 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಪಡೆದುಕೊಂಡಿತ್ತು. ಆದರೆ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಮೂವರು ಮುಖಂಡರು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು.