ಕಾರ್ಯಕ್ರಮಕ್ಕೆ ಚ್ಯುತಿ ತರುವ ಕೆಲಸ ನಡೆದಿದೆ. ನಾವು ಮರ ನಾಶ ಮಾಡಿಲ್ಲ

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಮಹಾಮನೆಯ ಬಸವಾನಂದ ಸ್ವಾಮೀಜಿ ಹುಟ್ಟುಹಬ್ಬದ ಅಂಗವಾಗಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತವೆ ಎಂದು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪಕ್ಕೆ ಮೃತ್ಯುಂಜಯ ಬಡಿಗಣ್ಣವರ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಜಂಟಿ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪ ಮಾಡಿದ್ದಾರೆ. ಶಾಲಾ ಆವರಣದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಸಸಿಗಳನ್ನು ಹಚ್ಚಲಾಗಿತ್ತು. ಆ ಗಿಡದ ಸುತ್ತ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ನಾವೇ ಅವುಗಳನ್ನು ಹಚ್ಚಿದ್ದೇವೆ. ಆರೇಳು ತಿಂಗಳ ಸಸಿ ಅವುಗಳಾಗಿವೆ. ಬೇರೆ ಕಡೆ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ಅಲ್ಲಿ ಕಟಾವು ಮಾಡಿದ ಮರದ ಟೊಂಗೆಗಳನ್ನು ತಂದು ಅಲ್ಲಿಟ್ಟು ಈ ರೀತಿಯ ಆರೋಪ ಮಾಡಿದ್ದಾರೆ.ನಾವು ಮರಗಳನ್ನು ನಾಶ ಮಾಡಿದ್ದೇ ಸಾಬೀತಾದಲ್ಲಿ ಮತ್ತೆ ಸಸಿಗಳನ್ನು ಹಚ್ಚಿ ಅವುಗಳನ್ನು ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಬಸವಾನಂದ ಸ್ವಾಮೀಜಿಗಳು ಪರಿಸರದ ಬಗ್ಗೆ ಕಾಳಜಿ ಉಳ್ಳಂತವರು. ಅವರೇ ಲಕ್ಷಾಂತರ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಹೀಗಿರುವಾಗ ಸಸಿಗಳನ್ನು ನಾಶ ಮಾಡುವ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ. ಈ ನಡೆಯುತ್ತಿರುವ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮ ಅಲ್ಲ. ಧಾರ್ಮಿಕ ಕಾರ್ಯಕ್ರಮ ಆಗಿರುವುದರಿಂದ ಇಂತಹ ಕಾರ್ಯಕ್ರಮಕ್ಕೆ ಚ್ಯುತಿ ತರುವ ಕೆಲಸ ಮಾಡಬಾರದು. ಎಲ್ಲರೂ ಸಹಕಾರ ನೀಡಬೇಕು ಎಂದರು...