ಅಭಿವೃದ್ಧಿಯ ಚಹರೆ ಬದಲಾಯಿಸುವ ಬಜೆಟ್- ಸಚಿವ ಸಿ.ಸಿ.ಪಾಟೀಲ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಂಡಿಸಿದ ಬಜೆಟ್ ಕರ್ನಾಟಕದ ಭವಿಷ್ಯದ ಕ್ರಾಂತಿಕಾರಿ ಬದಲಾವಣೆಗೆ ಸೂಚಕವಾಗಿದೆ. ಏಕೆಂದರೆ 2022 -23 ರಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಸದೃಢವಾಗಿ ಬೆಳವಣಿಗೆ ಕಂಡಿರುವುದು ಮತ್ತು ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಳವಾಗಿರುವುದು ಇಡೀ ನಾಡಿನ ಸಮಗ್ರ ಬೆಳವಣಿಗೆಗೆ ಮೂಲಾಧಾರವಾಗಲಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಲೋಕೋಪಯೋಗಿ ಇಲಾಖೆಗೆ ಕಳೆದ ಬಾರಿಗಿಂತ ಈ ಮುಂಗಡ ಪತ್ರದಲ್ಲಿ ಹೆಚ್ಚಿನ ಅನುದಾನವನ್ನು (ರೂ.10.741 ಕೋಟಿ) ಮೀಸಲಿಟ್ಟಿರುವುದಕ್ಕೆ ಸದರಿ ಖಾತೆಯ ಸಚಿವನಾಗಿ ಸನ್ಮಾನ್ಯ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ. ನಗರ ಮತ್ತು ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ರಸ್ತೆ, ಹೆದ್ದಾರಿ, ಸೇತುವೆ ಮುಂತಾದ ಸೌಲಭ್ಯಗಳ ಹೆಚ್ಚಳಕ್ಕೆ ಮುಖ್ಯಮಂತ್ರಿಗಳು ಹಲವು ಹೊಸ ಯೋಜನೆಗಳನ್ನು ಘೋಷಿಸಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ರಾಜ್ಯದ ಅನೇಕ ರಸ್ತೆ, ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಸೇತುವೆಗಳ ನಿರ್ಮಾಣ ಯೋಜನೆ ಪೂರ್ಣಗೊಂಡಿರುವುದು ಈ ಬಜೆಟ್ಟಿನಲ್ಲಿ ಬಿಂಬಿತವಾಗಿದೆ, ಅಷ್ಟೇ ಅಲ್ಲ ರಾಜ್ಯದ 1,008 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳ ನವೀಕರಣಕ್ಕಾಗಿ 440 ಕೋಟಿ ರೂ. ಅನುದಾನದ ಯೋಜನೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್ 2023ರ ಅಂತ್ಯದ ಒಳಗೆ 3,720 ಕೋಟಿ. ರೂ. ವೆಚ್ಚದಲ್ಲಿ ಸುಮಾರು 1,000 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾಗೂ 1,364 ಕಿ.ಮೀ. ಉದ್ದದ ಜಿಲ್ಲಾ ಮತ್ತು ಇತರೆ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಗುರಿಯತ್ತ ದಾಪುಗಾಲು ಇಡಲಾಗಿದ್ದು, ಈಗಾಗಲೇ ಗುರಿ ತಲುಪುವ ಹಂತದಲ್ಲಿದ್ದೇವೆ. 2014ರಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ 64,512 ಕೋಟಿ. ರೂ. ವೆಚ್ಚದಲ್ಲಿ ಒಟ್ಟು 6,715 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲಾಗಿದೆಯಲ್ಲದೇ, 1,25,000 ಕೋಟಿ ರೂ. ವೆಚ್ಚದಲ್ಲಿ 3,084 ಕಿ.ಮೀ. ಹೆದ್ದಾರಿ ಅಭಿವೃದ್ಧಿಪಡಿಸುವ ಯೋಜನೆ ಹಮ್ಮಿಕೊಂಡಿರುವುದರಿಂದ ರಾಜ್ಯದ ಸಾರಿಗೆ ಸಂಪರ್ಕದಲ್ಲಿ ಹೊಸ ಬದಲಾವಣೆಗೆ ಮುನ್ನುಡಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
5,486 ಕೋಟಿ ರೂ. ವೆಚ್ಚದ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ, 8,408 ಕೋಟಿ ರೂ. ವೆಚ್ಚದ ಬೆಂಗಳೂರು ಮೈಸೂರು ಹೆದ್ದಾರಿ, 4,544 ಕೋಟಿ ರೂ. ವೆಚ್ಚದ ಸೂರತ್-ಚೆನ್ನೈ ಹೆದ್ದಾರಿ, 1,200 ಕೋಟಿ ರೂ. ವೆಚ್ಚದ ಹುಬ್ಬಳ್ಳಿ ಧಾರವಾಡ 6 ಪಥಗಳ ರಸ್ತೆ, 2,200 ಕೋಟಿ ರೂ. ವೆಚ್ಚದ ಹುಬ್ಬಳ್ಳಿ-ಬಳ್ಳಾರಿ ಆಂಧ್ರ ಗಡಿ ಹೆದ್ದಾರಿ, 2,611 ಕೋಟಿ ರೂ. ವೆಚ್ಚದ ಚಿತ್ರದುರ್ಗ-ಹಾವೇರಿ ಮಾರ್ಗದ 6 ಪಥಗಳ ಹೆದ್ದಾರಿ ನಿರ್ಮಾಣದ ಕನಸನ್ನು ನನಸು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೈಸೂರು-ಕುಶಾಲನಗರ ಮಾರ್ಗದಲ್ಲಿ 92 ಕಿ.ಮೀ. ಉದ್ದದ ಹೆದ್ದಾರಿಯನ್ನು 4,128 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದಿಸಿರುವುದು ಆ ಭಾಗದ ಕೃಷಿ, ಕೈಗಾರಿಕೆ, ಸಾಗಾಟ ಸಂಚಾರ ಕ್ಷೇತ್ರಗಳ ಬೆಳವಣಿಗೆಗೆ ಕಾರಣವಾಗಲಿದೆ. 2022-23 ರಲ್ಲಿ ಉಂಟಾದ ಅತಿವೃಷ್ಠಿಯಿಂದ ಹಾನಿಗೊಳಗಾದ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿಯನ್ನು 500 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಕೋರ್ ನೆಟ್ವರ್ಕ್ ರಸ್ತೆ ಜಾಲದಲ್ಲಿ 1,700 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳನ್ನು ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಯೋಜನೆಯ (ಎಸ್.ಹೆಚ್.ಡಿ.ಪಿ ಹಂತ-4 ಘಟ್ಟ -3 ರಡಿ) 2,000 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವುದು ಅತ್ಯಂತ ಮಹತ್ವದ ನಿರ್ಧಾರವಾಗಿದೆ. ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸಲು ಕೆಶಿಪ್-4 ರಡಿ 2,943 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಯನ್ನು 5,000 ಕೋಟಿ ರೂ. ವೆಚ್ಚದ್ಲಲಿ ನಿರ್ಮಿಸಲು ಯೋಜಿಸಿರುವುದು ಪ್ರಾದೇಶಿಕ ಅಸಮತೋಲನ ನಿವಾರಿಸುವಲ್ಲಿ ದಿಟ್ಟ ಕ್ರಮವಾಗಿದೆ ಎಂದಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲಿ ಸಂಪರ್ಕ ಜಾಲ ವಿಸ್ತರಿಸಲು 5,000 ಕಿ.ಮೀ ಉದ್ದದ ಜಿಲ್ಲಾ ಪ್ರಮುಖ ರಸ್ತೆಗಳ ಕಾಮಗಾರಿಗಳಿಗೆ 1,500 ಕೋಟಿ ರೂ,ಗಳಷ್ಟು ಬೃಹತ್ ಅನುದಾನವನ್ನು ಆಯವ್ಯಯದಲ್ಲಿ ಒದಗಿಸುತ್ತಿರುವುದು ವಿಶೇಷವಾಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಸಂಪರ್ಕ ರಸ್ತೆಯಾದ ಬೀದರ್, ಕಲಬುರ್ಗಿ, ಬಳ್ಳಾರಿ ರಸ್ತೆಯನ್ನು 7,650 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಮತ್ತಷ್ಟು ಆರ್ಥಿಕ ಬಲವನ್ನು ಈ ಬಜೆಟ್ಟಿನಲ್ಲಿ ನೀಡಲಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಹಳ್ಳ-ಕೊಳ್ಳಗಳನ್ನು ಸುರಕ್ಷಿತವಾಗಿ ದಾಟಲು 500 ಹೊಸ ಕಾಲು ಸಂಕಗಳ ನಿರ್ಮಾಣ ಕಾಮಗಾರಿಯನ್ನು 250 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳುವ ಮತ್ತೊಂದು ಜನಪ್ರಿಯ ಯೋಜನೆ ಈ ಬಜೆಟ್ಟಿನಲ್ಲಿ ಸಾಕಾರಗೊಂಡಿದೆ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಮುಖ್ಯರಸ್ತೆಯ ಅಭಿವೃದ್ಧಿಗೆ 100 ಕೋಟಿ ರೂ. ಪ್ಯಾಕೇಜ್ ಘೋಷಿಸಿರುವುದು ಮತ್ತು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮತ್ತಷ್ಟು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಪಡಿಸುವ ಉದ್ದೇಶ ಪ್ರಕಟಿಸಿರುವುದು ನಾಡಿನ ಸಂಪರ್ಕ ಜಾಲದ ಅಭಿವೃದ್ಧಿಯಲ್ಲಿ ಹೆಚ್ಚಿನ ಆಶಾವಾದ ಮೂಡಿಸಲು ಕಾರಣವಾಗಿದೆ. ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿಯೂ ವಿಮಾನ ನಿಲ್ಧಾಣ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ಯೋಜನೆ ಪ್ರಕಟಿಸಿರುವುದರಿಂದ ಒಟ್ಟಾರೆ ಕರ್ನಾಟಕದ ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ವರದಾನವಾಗಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ.50 ಲಕ್ಷದವರೆಗಿನ ಕಾಮಗಾರಿಗಳಲ್ಲಿ ಶೇಕಡಾ 24 ರ ವರೆಗೆ ಮೀಸಲಾತಿ ನಿಗದಿ ಪಡಿಸಿದ್ದು, ಈ ಮೊತ್ತವನ್ನು ರೂ.1 ಕೋಟಿಗೆ ಹೆಚ್ಚಿಸಿರುವುದರಿಂದ ಆ ವರ್ಗದವರಿಗೆ ಅನುಕೂಲವಾಗಲಿದೆ. ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ರೂ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಘೋಷಣೆ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯ ಸ್ಥಾಪನೆಗೆ ಸಂಕಲ್ಪ ಮತ್ತು ಬೈಲಹೊಂಗಲ ತಾಲ್ಲೂಕಿನಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಪ್ರಾರಂಭದ ನಿರ್ಧಾರವೂ ಸೇರಿದಂತೆ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಈ ಮುಂಗಡ ಪತ್ರವು ಪ್ರೇರಣೆ ನೀಡಿರುವುದು ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ವರದಾನವಾಗಲಿದೆ ಎಂದಿದ್ದಾರೆ.
ರೈತರಿಗೆ ಅನುಕೂಲವಾಗುವ ಬಡ್ಡಿರಹಿತ ಸಾಲವನ್ನು 3 ಲಕ್ಷದಿಂದ 5 ಲಕ್ಷ ರೂ.ಗೆ ಏರಿಸಿರುವುದರ ಜೊತೆಗೆ ಕೃಷಿ, ನೀರಾವರಿ ಕ್ಷೇತ್ರಗಳಿಗೆ ಹಲವು ನೆರವು ನೀಡಲು ಸಂಕಲ್ಪಿಸಿರುವುದು ನಾಡಿನ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ರೈತರಿಗಷ್ಟೇ ಅಲ್ಲ, ಮಹಿಳೆಯರಿಗೆ, ಕಾರ್ಮಿಕರಿಗೆ, ಕೂಲಿಕಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ನೆರವಿಗೆ ಬರುವಂತಹ ಅನೇಕ ಯೋಜನೆಗಳು ಈ ಬಜೆಟ್ಟಿನಲ್ಲಿ ಸೇರಿರುವುದರಿಂದ ಇದು ಸರ್ವೆ ಜನೋ ಸುಖಿನೋಭವಂತು ಎನ್ನುವಂತಿದೆ. ನಮ್ಮ ಸರ್ಕಾರದ ದೂರದರ್ಶಿತ್ವದ ಯೋಜನೆಗಳೊಂದಿಗೆ ಮುಖ್ಯಮಂತ್ರಿಗಳ ಜನಪರ ಕಾಳಜಿಗಳು ಸಮ್ಮಿಳಿತಗೊಂಡು ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಅಭಿವೃದ್ಧಿಯ ಚಹರೆ, ಸ್ವರೂಪ ಬದಲಾವಣೆಗೊಂಡು ಕರ್ನಾಟಕವು ಮಾದರಿಯಾಗಿ, ಇಡೀ ರಾಷ್ಟ್ರದ ಗಮನ ಸೆಳೆಯುವಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದ್ದಾರೆ.
ಮತ್ತೊಮ್ಮೆ ನಾನು ಇಂತಹ ಜನೋಪಯೋಗಿ ಮುಂಗಡಪತ್ರವನ್ನು ನಾಡಿನ ಜನತೆಗೆ ಉಡುಗೊರೆಯಾಗಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿದ್ದಾರೆ.