ಲಖನ್ ಸ್ಪರ್ಧಿಸಿದರೆ ಮತ ವಿಭಜನೆ: ಸತೀಶ ಜಾರಕಿಹೊಳಿ

ಲಖನ್ ಸ್ಪರ್ಧಿಸಿದರೆ ಮತ ವಿಭಜನೆ: ಸತೀಶ ಜಾರಕಿಹೊಳಿ

ಬೆಳಗಾವಿ: 'ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮತ ವಿಭಜನೆ ಆಗುವ ಸಾಧ್ಯತೆ ಇದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, 'ಲಖನ್‌ ಜಾರಕಿಹೊಳಿ ಸದ್ಯ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಅವರು ನಮ್ಮೊಂದಿಗೆ ಇಲ್ಲ. ಯಾರು ಯಾರು ಸ್ಪರ್ಧಿಸುತ್ತಾರೆ ಎನ್ನುವುದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನ.23ರ ನಂತರ ಸ್ಪಷ್ಟವಾಗಲಿದೆ. ಒಂದು ಸ್ಥಾನ ಗೆಲ್ಲುವಷ್ಟು ಸ್ಥಳೀಯ ಸಂಸ್ಥೆಗಳ ಸದಸ್ಯರು ನಮ್ಮ ಜೊತೆಗಿದ್ದಾರೆ. ಬೇರೆ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದರು.

'ಜಿಲ್ಲೆಯಲ್ಲಿ ಪಕ್ಷದ ಟಿಕೆಟ್‌ಗೆ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ ಹಾಗೂ ವಿವೇಕರಾವ್ ಪಾಟೀಲ ಆಕಾಂಕ್ಷಿಗಳಾಗಿದ್ದಾರೆ. ಜನಪ್ರಿಯ ಅಭ್ಯರ್ಥಿ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವ ಸಿದ್ಧತೆಯಲ್ಲಿ ನಾವಿದ್ದೇವೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

'ಇಲ್ಲಿನದು ದ್ವಿಸದಸ್ಯ ಕ್ಷೇತ್ರವಾಗಿದ್ದು, ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಹಾಕಲಾಗುವುದು' ಎಂದು ಸ್ಪಷ್ಟಪಡಿಸಿದರು.

'ಅಭ್ಯರ್ಥಿ ಆಯ್ಕೆ ಸಂಬಂಧ ವರಿಷ್ಠರು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. 2-3 ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಆಗಲಿದೆ' ಎಂದು ಹೇಳಿದರು.

ಮಹಾನಗರಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯದಿರುವ ಕುರಿತು ಬಿಡುಗಡೆ ಮಾಡಿರುವ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ವಿಡಿಯೊದಲ್ಲಿ ನಾನು ಯಾರ ಹೆಸರನ್ನೂ ಪ್ರಸ್ತಾ‍ಪಿಸಿಲ್ಲ. ನೋವನ್ನು ಹೇಳಿದ್ದೇನೆ. ಪದೇ ಪದೇ ಹೀಗಾದರೆ ಪಕ್ಷ ಕಟ್ಟುವುದು ಕಷ್ಟ. ನೋಡಿದ್ದು, ಕೇಳಿದ್ದನ್ನು ಮಾತನಾಡಿದ್ದೇನೆ. ಪಾಲಿಕೆಯಲ್ಲಿ ಇನ್ನೂ 10 ಸ್ಥಾನ ಗೆಲ್ಲಬಹುದಿತ್ತು. ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಇನ್ನೂ 10 ಸಾವಿರ ಮತ ಗಳಿಸಬಹುದಿತ್ತು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿನ ಬೆಳವಣಿಗೆಗಳನ್ನು, ವೀಕ್ಷಕರು ಸಹ ಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ' ಎಂದು ಪ್ರತಿಕ್ರಿಯಿಸಿದರು.