ಕೊನೆಯ 4 ದಿನಗಳಲ್ಲಿ ಎಲ್ಲ ಬದಲಾಯ್ತು, ಡಿಕೆಶಿಗೆ ಕಠೋರ ಉತ್ತರ ನೀಡುತ್ತೇನೆ, ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ

ಕೊನೆಯ 4 ದಿನಗಳಲ್ಲಿ ಎಲ್ಲ ಬದಲಾಯ್ತು, ಡಿಕೆಶಿಗೆ ಕಠೋರ ಉತ್ತರ ನೀಡುತ್ತೇನೆ, ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆ 2021ರಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋತು ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಸಾಹುಕಾರ್ ಸೋದರರು ಇದ್ದರೂ ಕೊನೆ ಕ್ಷಣದಲ್ಲಿ ಲಖನ್ ಜಾರಕಿಹೊಳಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣಾ ಕಣದ ಚಿತ್ರಣವೇ ಸಂಪೂರ್ಣ ಬದಲಾಗಿ ಹೋಯಿತು. ಬೆಳಗಾವಿ ಸೋಲು ಬಿಜೆಪಿ ನಾಯಕರಿಗೆ ತೀವ್ರ ಹತಾಶೆ ಮತ್ತು ಒಳಗೊಳಗೆ ಭಿನ್ನಾಭಿಪ್ರಾಯಕ್ಕೆ ಕೂಡ ಕಾರಣವಾಗಿದೆ ಎನ್ನಬಹುದು.

ಪಕ್ಷದ ಸೋಲಿನ ಬಗ್ಗೆ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಲವೇ ದಿನಗಳಲ್ಲಿ ಡಿ ಕೆ ಶಿವಕುಮಾರ್ ಗೆ ಕಠೋರ ಉತ್ತರ ನೀಡುತ್ತೇನೆ, ಮೊದಲು ಎಲ್ಲವೂ ಸರಿಯಾಗಿತ್ತು, ಕೊನೆಯ ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಬದಲಾಯಿತು, ನಾನು ದೊಡ್ಡ ಬಾಂಬು ಸಿಡಿಸಬಹುದು ಆದರೆ ಈಗಲೇ ಹೇಳುವುದಿಲ್ಲ, ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ಕುತೂಹಲವನ್ನು ಹಾಗೆಯೇ ಇರಿಸಿದ್ದಾರೆ.

ಸಿದ್ದರಾಮಯ್ಯ ವೇಸ್ಟ್ ಬಾಡಿ: ನನಗೆ ಪಕ್ಷ ಮತ್ತು ಸಂಘದಿಂದ ಫೋನ್ ಬಂದಿದೆ, ಕೊನೆಯ ನಾಲ್ಕು ದಿನಗಳಲ್ಲಿ ಚಿತ್ರಣ ಬದಲಾಯಿತು, ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವರಿಗೆ ಭಯ ಶುರುವಾಗಿದೆ, ಹಿಂದುಳಿದ ನಾಯಕನಾಗಿ ಅವನ ಜನಾಂಗದವರೇ ಆತನನ್ನು ಮೂಲೆಗುಂಪು ಮಾಡುತ್ತಿದ್ದಾರೆ, ಸೋಲುವ ಮನುಷ್ಯನ ಬಗ್ಗೆ ನಾನು ಏನು ಹೇಳಲಿ ಎಂದು ಏಕವಚನದಲ್ಲಿಯೇ ಹೇಳಿದರು.

ನಮ್ಮ ಪಕ್ಷ ಸೋಲಬಾರದಿತ್ತು, ಸೋತಿದೆ, ಮುಂದಿನ ದಿನಗಳಲ್ಲಿ ಎಲ್ಲ ಹೇಳುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಇನ್ನು ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿರುವ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕಾರ್ಯಕರ್ತರಿಂದ ಬೆಳಗಾವಿಯಲ್ಲಿ ಕೇಳಿಬರುತ್ತಿದೆ.